ಭಾರತದಿಂದ ಲಂಡನ್ ಗೆ ತೆರಳುತ್ತಿದ್ದ ವಿಮಾನ ಪತನ: ಶೋಕ ವ್ಯಕ್ತಪಡಿಸಿದ ಪೋಪ್
ವರದಿ: ವ್ಯಾಟಿಕನ್ ನ್ಯೂಸ್
ಭಾರತದಿಂದ ಲಂಡನ್ ಗೆ ತೆರಳುತ್ತಿದ್ದ ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಪತನವಾದ ಪರಿಣಾಮ ಸುಮಾರು 242 ಜನರು ಮೃತಪಟ್ಟಿದ್ದಾರೆ. ಈ ಘಟನೆಗೆ ಶೋಕವನ್ನು ವ್ಯಕ್ತಪಡಿಸಿರುವ ವಿಶ್ವಗುರು ಲಿಯೋ ಅವರು ಅಗಲಿದ ಆತ್ಮಗಳಿಗೆ ಶಾಂತಿಯನ್ನು ಕೋರಿದ್ದಾರೆ ಹಾಗೂ ಅವರ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
242 ಜನರನ್ನು ಹೊತ್ತ ಬೋಯಿಂಗ್ ವಿಮಾನವು ಗುಜರಾತಿನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ ಗೆ ತೆರಳಿತ್ತು. ವಿಮಾನ ನಿಲ್ದಾಣದಿಂದ ಟೇಕಾಫ್ ಆಗುತ್ತಲೇ ಕೆಲವೇ ಕೆಲವು ದೂರದಲ್ಲಿ ವಿಮಾನವು ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಹುತೇಕ ಈ ವಿಮಾನದಲ್ಲಿದ್ದ ಎಲ್ಲರೂ ಸಹ ಮೃತ ಹೊಂದಿದ್ದಾರೆ.
ಈ ಘಟನೆಯ ಕುರಿತು ತಿಳಿಯುತ್ತಲೇ ವಿಶ್ವಗುರು ಲಿಯೋ ಅವರು ತಮ್ಮ ಸಂತಾಪ ಸಂದೇಶವನ್ನು ಮೃತ ಹೊಂದಿದ ಕುಟುಂಬಗಳಿಗೆ ಕಳುಹಿಸಿದ್ದಾರೆ. ವಿಶ್ವಗುರು ಲಿಯೂ ಅವರ ಟೆಲಿಗ್ರಾಂ ಸಂದೇಶಕ್ಕೆ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯತ್ರೋ ಪರೋಲಿನ್ ಅವರು ಸಹಿಯನ್ನು ಹಾಕಿದ್ದಾರೆ. ವಿಶ್ವಗುರು ಲಿಯೋ ಅವರು ತಮ್ಮ ಸಂದೇಶದಲ್ಲಿ ಅಗಲಿದ ವ್ಯಕ್ತಿಗಳ ಆತ್ಮಕ್ಕೆ ಶಾಂತಿಯನ್ನು ತೋರಿದ್ದು ಅವರ ಅಗಲಿಕೆಯ ದುಃಖವನ್ನು ಬರಿಸುವ ಶಕ್ತಿಯನ್ನು ಕುಟುಂಬಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಈ ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷರು, ಏಳು ಜನ ಪೋರ್ಚುಗೀಸರು ಹಾಗೂ ಒಬ್ಬ ಕೆನಡಾ ದೇಶದ ಪ್ರಜೆ ಇದ್ದ ಎಂದು ಮಾಹಿತಿ ಬಂದಿದೆ. ಅಗಲಿದವರಲ್ಲಿ 217 ಜನ ವಯಸ್ಕರು, 11 ಮಕ್ಕಳು ಹಾಗೂ ಎರಡು ನವಜಾತ ಶಿಶುಗಳು ಇದ್ದವು ಎಂದು ತಿಳಿದುಬಂದಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಘಟನೆಗೆ ದುಃಖವನ್ನು ಹಾಗೂ ಅಗಲಿದವರಿಗೆ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಬ್ರಿಟನ್ ಪ್ರಧಾನಮಂತ್ರಿ ಕೀರ್ ಸ್ಟ್ರಾಮರ್ ಅವರು ಈ ಘಟನೆಯನ್ನು ಅತ್ಯಂತ ವಿನಾಶಕಾರಿಯಂದು ಬಣ್ಣಿಸಿದ್ದಾರೆ.