ಸಿನೋಡಾಲಿಟಿ ಮತ್ತು ಶಾಂತಿಯಡೆಗಿನ ಯುರೋಪಿನ್ ಬಿಷಪ್'ಗಳ ಶ್ರಮವನ್ನು ಶ್ಲಾಘಿಸಿದ ಪೋಪ್ ಲಿಯೋ
ವರದಿ: ವ್ಯಾಟಿಕನ್ ನ್ಯೂಸ್
ಯುರೋಪಿಯನ್ ಧರ್ಮಾಧ್ಯಕ್ಷರ ಮಂಡಳಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಪೋಪ್ ಲಿಯೋ ಅವರು ಇಂದು ವ್ಯಾಟಿಕನ್ನಿನಲ್ಲಿ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕ್ರೈಸ್ತ ಪಂಗಡಗಳ ಸಂವಾದ, ಸಿನೋಡಲ್ ಸವಾಲುಗಳು, ಹಾಗೂ ಯೂರೋಪಿನಲ್ಲಿ ಶುಭಸಂದೇಶ ಪ್ರಸಾರದ ಕುರಿತು ಚರ್ಚಿಸಿದ್ದಾರೆ.
ಯುರೋಪಿಯನ್ ಧರ್ಮಾಧ್ಯಕ್ಷರ ಮಂಡಳಿ (ಸಿಸಿಇಇ) ಯ ಅಧ್ಯಕ್ಷ ಆರ್ಚ್'ಬಿಷಪ್ ಗಿಂತರಾಸ್ ಗ್ರೂಸಾಸ್ ಹಾಗೂ ಉಪಾಧ್ಯಕ್ಷ ಕಾರ್ಡಿನಲ್ ಲಾಡಿಸ್ಲಾವ್ ನೆಮೆಟ್ ಅವರನ್ನು ಪೋಪ್ ಹದಿನಾಲ್ಕನೇ ಲಿಯೋ ಅವರು ಎಕ್ಯುಮೆನಿಕಲ್ ಪ್ರತಿನಿಧಿಗಳನ್ನು ಭೇಟಿ ಮಾಡುವುದಕ್ಕೂ ಮುಂಚಿತವಾಗಿ ವ್ಯಾಟಿಕನ್ನಿನಲ್ಲಿ ಶನಿವಾರ ಭೇಟಿ ಮಾಡಿದರು.
ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯುರೋಪಿಯನ್ ಧರ್ಮಾಧ್ಯಕ್ಷರ ಮಂಡಳಿ (ಸಿಸಿಇಇ) ಯ ಅಧ್ಯಕ್ಷ ಆರ್ಚ್'ಬಿಷಪ್ ಗಿಂತರಾಸ್ ಗ್ರೂಸಾಸ್ ಅವರು ಯೂರೋಪಿನಲ್ಲಿನ ಧರ್ಮಸಭೆಯ ಕುರಿತು ವಿವಿಧ ವಿಷಯಗಳನ್ನು ಚರ್ಚಿಸಿದರು ಹಾಗೂ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಪೋಪ್ ಅವರೊಂದಿಗೆ ತಮ್ಮ ಭೇಟಿಯ ಕುರಿತು ಮಾತನಾಡಿದ ಅವರು "ಪೋಪ್ ಲಿಯೋ ಅವರು ಸಿಸಿಇಇಯ ಕಾರ್ಯಗಳನ್ನು ಶ್ಲಾಘಿಸಿ, ನಾವು ಈಗಾಗಲೇ ಮಾಡುತ್ತಿರುವುದನ್ನು ಮುಂದುವರೆಸಿ ಎಂದು ಹೇಳುವ ಮೂಲಕ ನಮಗೆ ಪ್ರೋತ್ಸಾಹವನ್ನು ನೀಡಿದ್ದಾರೆ" ಎಂದು ಹೇಳಿದರು.
ಯೂರೋಪ್ ಹಾಗೂ ಮಧ್ಯಪ್ರಾಚ್ಯದಲ್ಲಿ ಉಲ್ಬಣಿಸಿರುವ ಯುದ್ಧಗಳ ಕುರಿತು ಮಾತನಾಡಿದ ಯುರೋಪಿಯನ್ ಧರ್ಮಾಧ್ಯಕ್ಷರ ಮಂಡಳಿ (ಸಿಸಿಇಇ) ಯ ಅಧ್ಯಕ್ಷ ಆರ್ಚ್'ಬಿಷಪ್ ಗಿಂತರಾಸ್ ಗ್ರೂಸಾಸ್ ಅವರು ನಾವು ಶಾಂತಿಗಾಗಿ ಪ್ರಾರ್ಥಿಸುತ್ತೇವೆ. ಎಲ್ಲಾ ನಾಯಕರುಗಳು ವಿವೇಚನೆಯನ್ನು ಉಪಯೋಗಿಸುವ ಮೂಲಕ ಯುದ್ಧಕ್ಕೆ ಕೊನೆ ಹಾಡಬೇಕೆಂದು ಹೇಳಿದರು. ಇದೇ ವೇಳೆ ರಷ್ಯಾ ಅಧ್ಯಕ್ಷ ಪುಟಿನ್ ಅವರ ನಡೆಗೆ ಅವರು ಸಹಮತವನ್ನು ವ್ಯಕ್ತಪಡಿಸಲಿಲ್ಲ.
ಉಪಾಧ್ಯಕ್ಷ ಕಾರ್ಡಿನಲ್ ಲಾಡಿಸ್ಲಾವ್ ನೆಮೆಟ್ ಅವರು ಮಾತನಾಡಿ ಮರುಶಸ್ತ್ರಾಸ್ತ್ರಗೊಳಿಸುವುದು ಶಾಂತಿಗೆ ಉತ್ತರವಲ್ಲ ಅಥವಾ ಯಾವುದೇ ರೀತಿಯ ಶಾಂತಿ ನೆಲೆಸಬೇಕಾದರೆ ಶಸ್ತ್ರಗಳನ್ನು ತ್ಯಜಿಸಬೇಕೆ ಹೊರತು ಅವುಗಳನ್ನು ಹೆಚ್ಚಿಸಬಾರದು ಎಂದು ಹೇಳಿದರು. ಇದೇ ವೇಳೆ ಅವರು ನಿಶ್ಯಸ್ತ್ರೀಕರಣಕ್ಕೆ ಪೋಪ್ ಹದಿನಾಲ್ಕನೇ ಲಿಯೋ ಅವರ ಮಾತುಗಳನ್ನು ಪುನರುಚ್ಛರಿಸಿದರು.