ಇರಾನ್-ಇಸ್ರೇಲ್ ಸಂಘರ್ಷ: ಜವಾಬ್ದಾರಿ ಮತ್ತು ತರ್ಕಕ್ಕೆ ಮನವಿ ಮಾಡಿದ ಪೋಪ್
ವರದಿ: ಲಿಂಡಾ ಬೊರ್ಡೋನಿ
ಪೋಪ್ ಹದಿನಾಲ್ಕನೇ ಲಿಯೋ ಅವರು ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಮಿಡಿದಿದ್ದು, ಕೂಡಲೇ ಈ ಸಂಘರ್ಷವು ಕೊನೆಗೊಂಡು ಉಭಯ ದೇಶಗಳಲ್ಲಿ ಶಾಂತಿ ನೆಲೆಸಬೇಕು ಎಂದು ಹೇಳುವ ಮೂಲಕ ಶಾಂತಿಯ ಕುರಿತ ತಮ್ಮ ಮನವಿಯನ್ನು ಪುನರುಚ್ಛಿರಿಸಿದ್ದಾರೆ.
ಇಂದು ವ್ಯಾಟಿಕನ್ನಿನ ಸಂತ ಪೇತ್ರರ ಮಹಾದೇವಾಲಯದ ಆವರಣದಲ್ಲಿ ಕ್ರೀಡಾ ಜ್ಯೂಬಿಲಿಯ ಸಂದರ್ಭದಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರು ಮಾತನಾಡಿ "ಯಾರೂ ಸಹ ಮತ್ತೊಬ್ಬರ ಇರುವಿಕೆಯ ವಿರುದ್ಧ ಬೆದರಿಕೆ ಹಾಕಬಾರದು" ಎಂದು ಹೇಳಿದ್ದಾರೆ.
"ಇತ್ತೀಚಿನ ದಿನಗಳಲ್ಲಿ ಹಲವು ದುರ್ಘಟನೆಕಾರಿ ಸುದ್ದಿಗಳು ಬರುತ್ತಿವೆ. ಇರಾನ್ ಹಾಗೂ ಇಸ್ರೇಲ್ ಸಂಘರ್ಷವು ಬಹಳ ದುಬಾರಿಯಾಗಿದ್ದು, ಅತ್ಯಂತ ಅಪಾಯಕಾರಿ ಪರಿಸ್ಥಿತಿಯು ನಿರ್ಮಾಣವಾಗುತ್ತಿದೆ. ಈ ಕೂಡಲೇ ಉಭಯ ದೇಶಗಳು ಜವಾಬ್ದಾರಿ ಮತ್ತು ತರ್ಕದಿಂದ ಪರಿಸ್ಥಿತಿಯನ್ನು ಅವಲೋಕಿಸಬೇಕು" ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಪೋಪ್ ಅವರು "ಈ ಅಣ್ವಸ್ತ್ರಗಳಿಂದ ಮುಕ್ತವಾಗಿರುವ ಜಗತ್ತನ್ನು ನಿರ್ಮಿಸಲು ನಾವೆಲ್ಲರೂ ಶ್ರಮಿಸಬೇಕಿದೆ" ಎಂದು ಹೇಳಿದರು. "ಶಾಂತಿಯನ್ನು ಪರಿಣಾಮಕಾರಿ ಸಂವಾದ ಹಾಗೂ ಸಂಭಾಷಣೆಯ ಮೂಲಕ ಕಂಡುಕೊಳ್ಳುವುದು ಈ ಹೊತ್ತಿನ ತುರ್ತಾಗಿದೆ" ಎಂದು ಹೇಳಿದ್ದಾರೆ.
"ಎಲ್ಲರಿಗೂ ಭದ್ರತೆ ಮತ್ತು ಘನತೆಯನ್ನು ಖಾತರಿಪಡಿಸುವ ಪರಿಹಾರಗಳನ್ನು ಉತ್ತೇಜಿಸುವ ಮತ್ತು ಸಮನ್ವಯದ ಮಾರ್ಗಗಳನ್ನು ಪ್ರಾರಂಭಿಸುವ ಮೂಲಕ ಶಾಂತಿಯ ಉದ್ದೇಶವನ್ನು ಬೆಂಬಲಿಸುವುದು ಎಲ್ಲಾ ದೇಶಗಳ ಕರ್ತವ್ಯವಾಗಿದೆ" ಎಂದು ಅವರು ತೀರ್ಮಾನಿಸಿದರು.
ಶುಕ್ರವಾರ ಇಸ್ರೇಲ್ ಇರಾನ್‌ನ ಪರಮಾಣು ಸ್ಥಾವರಗಳು ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡ ನಂತರ ಇಸ್ರೇಲ್ ಮತ್ತು ಇರಾನ್ ನಡುವೆ ಗುಂಡಿನ ದಾಳಿ ಮತ್ತು ಕ್ಷಿಪಣಿ ದಾಳಿಗಳು ಮುಂದುವರೆದಿರುವಂತೆಯೇ ಪೋಪ್ ಅವರ ಈ ಮನವಿ ಬಂದಿದೆ. ಇರಾನ್ ತಕ್ಷಣವೇ ಕ್ಷಿಪಣಿಗಳ ದಾಳಿಯೊಂದಿಗೆ ಪ್ರತೀಕಾರ ತೀರಿಸಿಕೊಂಡಿತು. ಇಸ್ರೇಲ್‌ನಲ್ಲಿ ಮೂವರು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ, ಆದರೆ ಇರಾನ್‌ನಲ್ಲಿ 78 ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 320 ಜನರು ಗಾಯಗೊಂಡಿದ್ದಾರೆ.