ಬಾಂಗುಯ್ ಶಾಲೆಯ ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸಿದ ಪೋಪ್ ಲಿಯೋ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದಿನ ತ್ರಿಕಾಲ ಪ್ರಾರ್ಥನೆಗೂ ಮುಂಚಿತವಾಗಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸೆಂಟ್ರಲ್ ಆಫ್ರಿಕನ್ ಶಾಲೆಯ ಕಾಲ್ತುಳಿತ ದುರಂತದ ಕುರಿತು ಮಾತನಾಡಿರುವ ಅವರು ಇದರಿಂದ ನೊಂದ ಎಲ್ಲರಿಗಾಗಿ ಪ್ರಾರ್ಥಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಗತ್ತನ್ನು ಬಾಧಿಸುತ್ತಿರುವ ಯುದ್ಧವು ನಿಲ್ಲಲು ಎಲ್ಲರೂ ಸಹ ರಾಜತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
"ವಿದ್ಯಾರ್ಥಿಗಳಲ್ಲಿ ಹಲವಾರು ಸಾವುಗಳು ಮತ್ತು ಗಾಯಗಳಿಗೆ ಕಾರಣವಾದ ದುರಂತ ಅಪಘಾತದ ಶೋಕದಲ್ಲಿ, ಬಂಗುಯಿಯಲ್ಲಿರುವ ಬಾರ್ತೆಲೆಮಿ ಬೊಗಾಂಡಾ ಪ್ರೌಢಶಾಲೆಯ ಸಮುದಾಯಕ್ಕಾಗಿ ನಾನು ನನ್ನ ಪ್ರಾರ್ಥನೆಗಳನ್ನು ಭರವಸೆ ನೀಡುತ್ತೇನೆ" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಹೇಳಿದ್ದಾರೆ.
ಮಧ್ಯ ಆಫ್ರಿಕಾದ ಗಣರಾಜ್ಯದ ರಾಜಧಾನಿ ಬಂಗುಯಿಯಲ್ಲಿರುವ ಶಾಲೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 29 ವಿದ್ಯಾರ್ಥಿಗಳು ಸಾವನ್ನಪ್ಪಿದರು ಮತ್ತು 260 ಕ್ಕೂ ಹೆಚ್ಚು ಜನರು ಗಾಯಗೊಂಡರು.
ವಿದ್ಯುತ್ ಸ್ಫೋಟವು ಅಂತಿಮ ಪರೀಕ್ಷೆಗೆ ಕುಳಿತಿದ್ದ 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಭೀತಿಯನ್ನುಂಟುಮಾಡಿದೆ ಎಂದು ವರದಿಯಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದರು. ಕನಿಷ್ಠ 260 ಜನರು ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ.
ಬುಧವಾರ ಶಾಲಾ ಆವರಣದಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಲ್ಲಿ ದೋಷ ಕಂಡುಬಂದಿದ್ದು, ವಿದ್ಯುತ್ ಸರಬರಾಜು ಪುನಃಸ್ಥಾಪಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಪೋಪ್ ತಮ್ಮ ಮಾತುಗಳನ್ನು ಮುಗಿಸುವುದಕ್ಕೆ ಮುಂಚಿತವಾಗಿ, ಜಗತ್ತಿನಲ್ಲಿ ಯುದ್ಧದಿಂದ ಬಳಲುತ್ತಿರುವ ಜನರ ಕಡೆಗೆ ಗಮನವನ್ನು ಹರಿಸಿದರು. ಯುದ್ಧವು ಕೊನೆಗೊಂಡು ಜಗತ್ತಿನಲ್ಲಿ ಶಾಂತಿ ನೆಲೆಗೊಳ್ಳಲು ರಾಜತಾಂತ್ರಿಕ ಸಂವಾದವೇ ಪರಿಹಾರ ಎಂದು ಹೇಳಿದರು.