ಪೋಪ್ ಅಗಿ ಆಯ್ಕೆಯಾಗುವವರು ಮೊದಲು ಹೋಗುವ ಕೋಣೆ "ಕಂಬನಿಯ ಕೋಣೆ"
ಸಿ. ಮರಿಜೋಸೆಫ್
ಕಂಬನಿಯ ಕೋಣೆ ಎಂಬುದು ಹೊಸ ಪೋಪರಿಗೆ ಮಾರ್ಪಾಟಿನ ಕ್ಷಣವಾಗಿದೆ.
ಇಟಾಲಿಯನ್ ಭಾಷೆಯಲ್ಲಿ "ಸ್ಟಾನ್ಜಾ ಡೆಲ್ಲೆ ಲ್ಯಾಕ್ರಿಮ್" ಎಂದು ಕರೆಯಲ್ಪಡುವ ಕಂಬನಿಯ ಕೋಣೆ ವ್ಯಾಟಿಕನ್ನಿನ ಸಂತ ರಾಯಪ್ಪರ ಬಸಿಲಿಕಾದಲ್ಲಿದೆ. ಹೊಸ ಪೋಪರು ತಮ್ಮ ಧರ್ಮಾಡಳಿತವನ್ನು ಪ್ರಾರಂಭಿಸಲು ಸಿದ್ಧರಾಗುವ ಸ್ಥಳವಿದು. ಆ ಸಂದರ್ಭದಲ್ಲಿ ಪೇತ್ರನ ಸಿಂಹಾಸನದ ಉತ್ತರಾಧಿಕಾರಿ ಭಾವೋದ್ವೇಗಕ್ಕೆ ಒಳಗಾಗುವುದರಿಂದ ಈ ಕೊಠಡಿಗೆ ಕಣ್ಣೀರಿನ ಕೋಣೆ ಎಂದು ಹೆಸರು ಪಡೆದಿದೆ.
ಹೊಸ ಜಗದ್ಗುರುಗಳು ಅಧಿಕಾರ ಸ್ವೀಕರಿಸುವಾಗ ಅನುಭವಿಸುವ ಉತ್ಕಟ ಭಾವನೆಗಳಿಂದಾಗಿ ಈ ಕೋಣೆ ಆಪ್ತವೂ ಗಂಭೀರವೂ ಆಗಿ, ಪೋಪರಾಗಿ ಆಯ್ಕೆಯಾದವರು ತಮ್ಮ ಹೊಸ ಜವಾಬ್ದಾರಿಗಾಗಿ ಸಿದ್ದರಾಗುತ್ತಾರೆ. ಆ ಕ್ಷಣದ ವಿನೀತ ಭಾವ, ಪ್ರಭುವಿನೊಂದಿಗಿನ ಶರಣಾಗತಿ, ಬೃಹತ್ ಜವಾಬ್ದಾರಿಯ ಬಗೆಗಿನ ಚಿಂತೆ ಮತ್ತು ದುಗುಡಗಳು ಕಣ್ಣೀರು ತರಿಸುವುದು ಸಹಜ.
ಇನ್ನು ಮುಂದೆ ಎಲ್ಲವೂ ಬಿಳಿ. ಒಳ ಉಡುಪು, ಹೊರ ಅಂಗಿ, ಟೊಪ್ಪಿ, ಎದೆಯ ಮೇಲಿನ ಶಿಲುಬೆ, ನಡುಕಟ್ಟು ಎಲ್ಲವೂ ಬಿಳಿದೋ ಬಿಳಿದು. ಸುಮಾರು ನೂರಮುವ್ವತ್ತು ಕೋಟಿ ಜನಸಂಖ್ಯೆಯ ಕಥೋಲಿಕರ ಪರಮೋಚ್ಚ ಧರ್ಮಾಧಿಕಾರಿಯಾಗಿ ಪೋಪ್ ತಮ್ಮ ಮೊದಲ ಆಶೀರ್ವಾದವನ್ನು ನೀಡಲು ಸಿದ್ಧರಾಗುವ ತಾಣವಿದು.
ಹೊಸ ಪೋಪರಾಗಿ ಕಾಣಿಸಿಕೊಳ್ಳುವ ಮುನ್ನ ಆತ್ಮಶೋಧನೆ ಮಾಡಿಕೊಳ್ಳುವ ಮತ್ತು ಮೊಣಕಾಲೂರಿ ಪ್ರಾರ್ಥಿಸುವ, ಮೌನವಾಗಿ ಧ್ಯಾನಿಸುವ ಪುಣ್ಯಜಾಗವಿದು. ಜಗದ್ಗುರುವಿನ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಲು ಸರ್ವೇಶ್ವರ ಸ್ವಾಮಿಯ ಮಾರ್ಗದರ್ಶನ ಮತ್ತು ಆಶೀರ್ವಾದವನ್ನು ಕೇಳಬಹುದಾದ ದಿವ್ಯಸ್ಥಳವಿದು. ಈ ಕಂಬನಿಯ ಕೋಣೆಯಲ್ಲೇ ಹೊಸಯುಗದ ಆರಂಭ.