ಮ್ಯಾನ್ಮಾರ್'ನಲ್ಲಿ ಕದನವಿರಾಮ ಮತ್ತು ಸಂವಾದಕ್ಕೆ ಮನವಿ ಮಾಡಿದ ದಕ್ಷಿಣ ಏಷ್ಯಾ ನಾಯಕರು
ವರದಿ: ವ್ಯಾಟಿಕನ್ ನ್ಯೂಸ್
ಮ್ಯಾನ್ಮಾರ್ ದೇಶದಲ್ಲಿ ಮುಂದುವರೆಯುತ್ತಿರುವ ಹಿಂಸೆ ಹಾಗೂ ಸಂಘರ್ಷದ ಹಿನ್ನೆಲೆಯಲ್ಲಿ, ಅಸಿಯಾನ್ ಸಭೆಯಲ್ಲಿ ಭಾಗವಹಿಸಿರುವ ದಕ್ಷಿಣ ಏಷ್ಯಾ ದೇಶಗಳ ನಾಯಕರುಗಳು ಕದನ ವಿರಾಮವನ್ನು ಘೋಷಿಸುವಂತೆ ಹಾಗೂ ಸಂವಾದಕ್ಕೆ ಅವಕಾಶವನ್ನು ನೀಡಬೇಕು ಎಂದು ಮನವಿಯನ್ನು ಮಾಡಿದ್ದಾರೆ.
ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ (ASEAN) 46 ನೇ ಶೃಂಗಸಭೆಯು ಹತ್ತು ಆಗ್ನೇಯ ಏಷ್ಯಾದ ದೇಶಗಳನ್ನು ಒಳಗೊಂಡಿರುವ ಪ್ರಾದೇಶಿಕ ಸಂಘಟನೆಯಾಗಿದ್ದು, ಅದರ ಸದಸ್ಯ ರಾಷ್ಟ್ರಗಳಲ್ಲಿ ಆರ್ಥಿಕ ಮತ್ತು ಭದ್ರತಾ ಸಹಕಾರವನ್ನು ಉತ್ತೇಜಿಸುವ ಪ್ರಾಥಮಿಕ ಗುರಿಗಳನ್ನು ಹೊಂದಿದೆ.
ಆಸಿಯಾನ್ ಸದಸ್ಯ ರಾಷ್ಟ್ರಗಳು ಬ್ರೂನಿ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ.
ಕೌಲಾಲಂಪುರದಲ್ಲಿ ಮೇ 26-27 ರಂದು ನಡೆದ 46 ನೇ ಆಸಿಯಾನ್ ಶೃಂಗಸಭೆಯು ಮಂಗಳವಾರ ಪ್ರಾದೇಶಿಕ ಆರ್ಥಿಕ ಸಹಕಾರ, ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಬಿಕ್ಕಟ್ಟನ್ನು ಮಧ್ಯಸ್ಥಿಕೆ ವಹಿಸುವ ಪ್ರಯತ್ನಗಳು ಮತ್ತು ಆಸಿಯಾನ್ ರಾಷ್ಟ್ರಗಳ ಮೇಲೆ ಅಮೆರಿಕದ ಸುಂಕಗಳ ಪರಿಣಾಮವನ್ನು ಪರಿಹರಿಸುವ ಕುರಿತು ಚರ್ಚೆಗಳೊಂದಿಗೆ ಮುಕ್ತಾಯವಾಯಿತು.
"ಬಿಕ್ಕಟ್ಟಿಗೆ ಶಾಶ್ವತವಾದ ಶಾಂತಿಯುತ ಪರಿಹಾರವನ್ನು ಸಾಧಿಸುವ ಗುರಿಯೊಂದಿಗೆ, ಸುಸ್ಥಿರ ರೀತಿಯಲ್ಲಿ ಸಂಬಂಧಪಟ್ಟ ಪಕ್ಷಗಳನ್ನು ತಲುಪುವುದನ್ನು ಮುಂದುವರಿಸುವ ಮೂಲಕ ಸಮಗ್ರ ರಾಷ್ಟ್ರೀಯ ಸಂವಾದವನ್ನು ನಡೆಸುವ ಕಡೆಗೆ ವಿಶ್ವಾಸವನ್ನು ಬೆಳೆಸಲು ನಾವು ಮ್ಯಾನ್ಮಾರ್‌ನಲ್ಲಿರುವ ಎಲ್ಲಾ ಸಂಬಂಧಿತ ಪಾಲುದಾರರನ್ನು ಪ್ರೋತ್ಸಾಹಿಸಿದ್ದೇವೆ" ಎಂದು ಆಸಿಯಾನ್ ನಾಯಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮ್ಯಾನ್ಮಾರ್‌ನ ಪಾಂಟಿಫಿಕಲ್ ಮಿಷನ್ ಸೊಸೈಟೀಸ್‌ನ ರಾಷ್ಟ್ರೀಯ ನಿರ್ದೇಶಕ ಫಾದರ್ ಸ್ಟೀಫನ್ ಚಿಟ್ ಥೀನ್ ಅವರು ಏಜೆನ್ಸಿಯೊಂದಿಗೆ ಮಾತನಾಡಿ, "ದೇಶವು ವಿಭಜನೆಯಾಗಿದೆ" ಎಂದು ಗಮನಿಸಿದರು. ದೇಶದ ಕೆಲವು ಭಾಗಗಳಲ್ಲಿ ಶಾಂತಿ ನೆಲೆಸಿದ್ದು, ಅಲ್ಲಿ ಗುರುಗಳು ಬಲಿಪೂಜೆಯನ್ನು ಅರ್ಪಿಸಬಹುದು ಎಂದು ಹೇಳಿದ ಅವರು ಇನ್ನಿತರ ಸ್ಥಳಗಳಲ್ಲಿ ಬಹಳ ವಿಷಮ ವಾತಾವರಣವಿದೆ ಎಂದು ಹೇಳಿದ್ದಾರೆ.
"ನಾವು ಇಡೀ ಬರ್ಮಾ ಜನರನ್ನು ಒಳಗೊಳ್ಳುವ ದೊಡ್ಡ ಪರೀಕ್ಷೆಯ ಸಮಯದಲ್ಲಿ ಬದುಕುತ್ತಿದ್ದೇವೆ" ಎಂದು ಅವರು ಹೇಳಿದರು, ಆದರೆ "ಈ ಜುಬಿಲಿ ವರ್ಷದ ವಿಶೇಷ ವಿಷಯವು ನಮಗೆ ನೆನಪಿಸುವಂತೆ ನಮ್ಮ ಭರವಸೆಯು ಕ್ರಿಸ್ತನಲ್ಲಿ ನೆಲೆಗೊಂಡಿದೆ ಮತ್ತು ಬೇರೂರಿದೆ, ಅವರು ಎಂದಿಗೂ ನಿರಾಶೆಗೊಳಿಸುವುದಿಲ್ಲ ಮತ್ತು ಎಂದಿಗೂ ಕೈಬಿಡುವುದಿಲ್ಲ" ಎಂದು ಅವರು ಒತ್ತಿ ಹೇಳಿದರು.