ರೇಜಿನಾ ಚೇಲಿಯಲ್ಲಿ ಪೋಪ್: ವಿಶ್ವಾಸದ ಸಂತೋಷದಲ್ಲಿ ನಾವೆಲ್ಲರೂ ಮುಂದುವರೆಯಬೇಕು
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದಿನ ತಮ್ಮ ರೆಜೀನಾ ಚೇಲಿ ಪ್ರಾರ್ಥನೆಯಲ್ಲಿ 'ನಿಮ್ಮ ಹೃದಯಗಳು ಕಳವಳಗೊಳ್ಳದಿರಲಿ' ಎಂಬ ಯೇಸುಕ್ರಿಸ್ತರ ಮಾತುಗಳನ್ನು ಪುನರುಚ್ಛಿರಿಸಿದ್ದಾರೆ. ನೆರೆದಿದ್ದ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿರುವ ಅವರು; "ವಿಶ್ವಾಸದ ಸಂತೋಷದಲ್ಲಿ ನಾವೆಲ್ಲರೂ ಮುಂದುವರೆಯಬೇಕು" ಎಂದು ಹೇಳಿದ್ದಾರೆ. ಇದೇ ವೇಳೆ ತಮ್ಮ ಮೇಲೆ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುವ ಎಲ್ಲರಿಗೂ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಸಂತ ಪೇತ್ರರ ಮಹಾದೇವಾಲಯದ ಉಪ್ಪರಿಗೆಯಿಂದ ರೆಜೀನಾ ಚೇಲಿ ಪ್ರಾರ್ಥನೆಯನ್ನು ಪಠಿಸಿದ ಪೋಪ್ ಸಿಂಹನಾಥರು (ಲಿಯೋ) ಅವರು ದೇವರು ಸದಾ ನಮ್ಮೊಂದಿಗಿರುತ್ತಾರೆ. ಅವರು ನಮ್ಮೆಲ್ಲಾ ಸಂಕಷ್ಟಗಳಲ್ಲಿ ನಮ್ಮನ್ನು ಆದರಿಸಿ, ಉದ್ಧರಿಸುತ್ತಾರೆ" ಎಂದು ಹೇಳುವ ಮೂಲಕ ವಿಶ್ವಾಸಿಗಳಿಗೆ ಧೈರ್ಯವನ್ನು ತುಂಬಿದ್ದಾರೆ.
ಮುಂದುವರೆದು ಮಾತನಾಡಿದ ಅವರು "ಕೆಲವು ದಿನಗಳ ಹಿಂದೆ ನಾನು ನನ್ನ ಸೇವೆಯನ್ನು ಆರಂಭಿಸಿದ್ದೇನೆ. ನನಗೋಸ್ಕರ ನೀವೆಲ್ಲರೂ ತೋರಿಸುತ್ತಿರುವ ಪ್ರೀತಿಗಾಗಿ ನಾನು ಆಭಾರಿಯಾಗಿದ್ದೇನೆ ಹಾಗೂ ಇದೇ ರೀತಿ ನಿಮ್ಮ ಐಕ್ಯತೆ ಹಾಗೂ ಪ್ರಾರ್ಥನೆಗಳಿಂದ ನನಗೆ ಬೆಂಬಲವಾಗಿರಿ ಎಂದು ನಾನು ನಿಮ್ಮನ್ನು ವಿನಂತಿಸಿಕೊಳ್ಳುತ್ತೇನೆ" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ತಮ್ಮ ಧನ್ಯವಾದಗಳನ್ನು ವ್ಯಕ್ತಪಡಿಸಿದರು.
ಇಂದಿನ ಶುಭಸಂದೇಶದ ವಾಕ್ಯಗಳ ಕುರಿತು ಚಿಂತನೆಯನ್ನು ವ್ಯಕ್ತಪಡಿಸುತ್ತಾ, ಪೋಪ್ ಹದಿನಾಲ್ಕನೇ ಲಿಯೋ ಅವರು "ಪ್ರಭು ನಮಗೆ ಕಳವಳಗೊಳ್ಳದಿರಲು ಹೇಳುತ್ತಾರೆ. ನಮ್ಮ ಬದುಕಿನ ಪಯಣದಲ್ಲಿ ಯಾವುದೇ ರೀತಿಯ ಅಡೆತಡೆಗಳು ಎದುರಾದರೂ, ನಾವು ಭರವಸೆ ಹಾಗೂ ವಿಶ್ವಾಸದಿಂದ ಮುಂದುವರೆಯಬೇಕು ಎಂಬುದು ಪ್ರಭುವಿನ ಕರೆಯಾಗಿದೆ" ಎಂದು ಹೇಳಿದ್ದಾರೆ.
ಮುಂದುವರೆದು ಕ್ರಿಸ್ತರ ಪ್ರೀತಿಯ ಕುರಿತು ಮಾತನಾಡಿದ ಪೋಪ್ ಲಿಯೋ ಅವರು ""ನಾವು ಆತನ ಪ್ರೀತಿಯಲ್ಲಿ ಉಳಿದರೆ, ಆತನು ನಮ್ಮಲ್ಲಿ ವಾಸಿಸುತ್ತಾನೆ - ನಮ್ಮ ಜೀವನವು ದೇವರ ದೇವಾಲಯವಾಗುತ್ತದೆ" ಮತ್ತು ಈ ಪ್ರೀತಿಯು ನಮ್ಮನ್ನು ಪ್ರಬುದ್ಧಗೊಳಿಸುತ್ತದೆ, "ನಾವು ಯೋಚಿಸುವ ರೀತಿ ಮತ್ತು ನಾವು ಮಾಡುವ ಆಯ್ಕೆಗಳನ್ನು ರೂಪಿಸುತ್ತದೆ", ನಮ್ಮ ಅಸ್ತಿತ್ವದ ಎಲ್ಲಾ ಅಂಶಗಳಿಗೂ ಹರಡುತ್ತದೆ." ಎಂದು ಹೇಳಿದರು.