ತಮ್ಮ ಅಗಸ್ಟೀನರ ಸಭೆಯ ಸಹೋದರರಿಗೆ ಅಚ್ಚರಿಯೆ ಭೇಟಿ ನೀಡಿದ ಪೋಪ್ ಲಿಯೋ XIV
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದು ರೋಮ್ ನಗರದಲ್ಲಿರುವ ಸಂತ ಅಗಸ್ಟೀನರ ಸಭೆಯ ನಿವಾಸಕ್ಕೆ ಭೇಟಿ ನೀಡುವ ಮೂಲಕ ತಮ್ಮ ಅಗಸ್ಟೀನಿಯನ್ ಸಹೋದರರಿಗೆ ಅಚ್ಚರಿಯ ಭೇಟಿಯನ್ನು ನೀಡಿದ್ದಾರೆ. ಅವರು ಕಾರ್ಡಿನಲ್ ಆಗಿದ್ದ ಸಂದರ್ಭದಲ್ಲಿಯೂ ಸಹ ಇಲ್ಲಿಗೆ ಭೇಟಿ ನೀಡುತ್ತಿದ್ದರು.
ಇಂದು ಫಾತಿಮಾ ಮಾತೆಯ ಹಬ್ಬದ ಹಿನ್ನೆಲೆ ಪೋಪ್ ಹದಿನಾಲ್ಕನೇ ಲಿಯೋ ಅವರು ವ್ಯಾಟಿಕನ್ ಬಳಿಯ ಸಂತ ಅಗಸ್ಟೀನರ ಸಭೆಯ ಜನರಲ್ ಕ್ಯೂರಿಯಾ ನಿವಾಸದಲ್ಲಿ ತಮ್ಮ ಸಹೋದರ ಅಗಸ್ಟೀನ್ ಸಭೆಯ ಸನ್ಯಾಸಿಗಳೊಂದಿಗೆ ಬಲಿಪೂಜೆಯನ್ನು ಅರ್ಪಿಸಿದ್ದಾರೆ. ತದನಂತರ ಅವರು ಅಲ್ಲಿಯೇ ಭೋಜನವನ್ನು ಸವಿದಿದ್ದಾರೆ. ಅವರು ಕಾರ್ಡಿನಲ್ ಆಗಿದ್ದ ಸಂದರ್ಭದಲ್ಲಿ ಇಲ್ಲಿಗೆ ಪದೇ ಪದೇ ಭೇಟಿ ನೀಡುತ್ತಿದ್ದರು.
2001 ರಿಂದ 2013 ರವರೆಗೂ ಪೋಪ್ ಲಿಯೋ XIV ಅವರು ಅಗಸ್ಟೀನರ ಸಭೆಯ ಪ್ರಯರ್ ಜನರಲ್ ಆಗಿದ್ದ ವೇಳೆ ಸುಮಾರು 13 ವರ್ಷಗಳ ಕಾಲ ಇಲ್ಲಿ ತಂಗಿದ್ದರು. ಒಂದರ್ಥದಲ್ಲಿ ಇದು ಅವರ ಎರಡನೇ ಮನೆಯೂ ಹೌದು. ಧಾರ್ಮಿಕ ಸಭೆಯ ನಿಯಮಗಳು ಹಾಗೂ ಸಂತ ಅಗಸ್ಟೀನರ ನಿಯಮದಂತೆ ಇಲ್ಲಿ ಎಲ್ಲರೂ ಒಂದೇ ಹೃದಯ ಮತ್ತು ಒಂದೇ ಆತ್ಮದ ಸಹೋದರರಂತೆ ಸಮಾಧಾನ ಹಾಗೂ ಶಾಂತಿಯಿಂದ ಜೀವಿಸಬೇಕು.
ಪೋಪ್ ಲಿಯೋ ಅವರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ ಎಂದು ತಿಳಿಯುತ್ತಲೇ ನೂರಾರು ಜನರು ಸಂತ ಅಗಸ್ಟೀನರ ಸಭೆಯ ಪ್ರಧಾನ ನಿವಾಸ ಗೇಟಿನ ಬಳಿ ಜಮಾಯಿಸಿದ್ದರು. ಪೋಪ್ ಇಲ್ಲಿಂದ ಹೊರಡುವ ಸಂದರ್ಭದಲ್ಲಿ ತಮಗಾಗಿ ಕಾಯುತ್ತಿದ್ದವರೆಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿದರು.
ಈ ಕುರಿತು ಮಾತನಾಡಿದ ಅಗಸ್ಟೀನರ ಸಭೆಯ ಪ್ರಸಕ್ತ ಪ್ರಯರ್ ಜನರಲ್ ಫಾದರ್ ಅಲೆಹಾಂದ್ರೋ ಮೊರಾಲ್ ಅವರು "ಪೋಪ್ ಲಿಯೋ ಅವರು ಇದೇ ನಿವಾಸದಲ್ಲಿ ಹಲವಾರು ವರ್ಷಗಳ ಕಾಲ ಊಟ ಮಾಡುತ್ತಿದ್ದರು. ಅವರು ಇಲ್ಲೇ ಜೀವಿಸಿದ್ದರು. ಇಂದು ಕೃತಜ್ಞತೆಯನ್ನು ಹೇಳುವ ನಿಟ್ಟಿನಲ್ಲಿ ಇಲ್ಲಿಗೆ ಬಂದು, ಬಲಿಪೂಜೆಯನ್ನರ್ಪಿಸಿ, ನಮ್ಮೊಂದಿಗೆ ಊಟ ಮಾಡಿದ್ದಾರೆ" ಎಂದು ಹೇಳಿದ್ದಾರೆ.