ರೋಮ್ ನಗರದ ಹೊರಗೆ ಇರುವ ಮಾತೆ ಮರಿಯಳ ಪುಣ್ಯಕ್ಷೇತ್ರಕ್ಕೆ ಪೋಪ್ ಭೇಟಿ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ರೋಮ್ ನಗರದಿಂದ ಹೊರಗೆ ಇರುವ ಒಳ್ಳೆಯ ಆಲೋಚನೆಯ ಮಾತೆಯ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ್ದಾರೆ. ಪೋಪ್ ಆದ ನಂತರ ಇದೇ ಮೊದಲ ಬಾರಿಗೆ ಅವರು ಖಾಸಗಿ ಭೇಟಿಯನ್ನು ಇಲ್ಲಿಗೆ ನೀಡಿದ್ದು, ಪ್ರಾರ್ಥಿಸಿದ್ದಾರೆ. ಅವರು ಕಾರ್ಡಿನಲರಾಗಿದ್ದಾಗ ಈ ಪುಣ್ಯಕ್ಷೇತ್ರದಲ್ಲಿ ಬಲಿಪೂಜೆಯನ್ನು ಅರ್ಪಿಸಿದ್ದರು.
ರೋಮ್ ನಗರದ ಹೊರಗೆ ಇರುವ ಜೆನಾಝಾನೋ ಎಂಬ ಪ್ರದೇಶದಲ್ಲಿ ಇರುವ, ಹನ್ನೆರಡನೇ ಶತಮಾನದಿಂದ ಸಂತ ಅಗಸ್ಟೀನರ ಸಭೆಯ ಸನ್ಯಾಸಿಗಳು ಮುನ್ನಡೆಸಿಕೊಂಡು ಬರುತ್ತಿರುವ ಈ ಪುಣ್ಯಕ್ಷೇತ್ರಕ್ಕೆ ಪೋಪ್ ಹದಿನಾಲ್ಕನೇ ಲಿಯೋ ಅವರು ಭೇಟಿ ನೀಡಿದ್ದಾರೆ.
ಈ ಪುಣ್ಯಕ್ಷೇತ್ರವು ಪೋಪ್ ಹದಿಮೂರನೇ ಲಿಯೋ ಅವರ ನೆಚ್ಚಿನ ಸ್ಥಳವಾಗಿದ್ದು, ಅವರು ಇದನ್ನು ಮೈನರ್ ಬಸಿಲಿಕಾ ಹಂತಕ್ಕೆ 1903 ರಲ್ಲಿ ಏರಿಸಿದ್ದರು. ಈ ಪುಣ್ಯಕ್ಷೇತ್ರಕ್ಕೆ ಪೋಪ್ ಇಪ್ಪತ್ಮೂರನೇ ಜಾನರು ಹಾಗೂ ಪೋಪ್ ಸಂತ ದ್ವಿತೀಯ ಜಾನ್ ಪೌಲರು ಭೇಟಿ ನೀಡಿದ್ದಾರೆ.
ಫೋಕ್ಸ್'ವಾಗನ್ ಮಲ್ಟಿವ್ಯಾನ್ ಕಾರ್ ಮೂಲಕ ಇಲ್ಲಿಗೆ ಆಗಮಿಸಿದ ಪೋಪ್ ಲಿಯೋ ಅವರು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತು ಪ್ರಯಾಣಿಸಿದರು. ಪೋಪ್ ಇಲ್ಲಿಗೆ ಆಗಮಿಸುತ್ತಿದ್ದಂತೆ ಇಲ್ಲಿ ನೆರೆದಿದ್ದ ಜನರು "ಲಿಯೋ ಲಿಯೋ" ಎಂದು ಕೂಗುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಈ ಭೇಟಿಯ ಕುರಿತು ಮಾತನಾಡಿರುವ ಪೋಪ್ ಹದಿನಾಲ್ಕನೇ ಲಿಯೋ ಅವರು "ನೂತನ ಸೇವೆಯನ್ನು ನನಗೆ ಒಪ್ಪಿಸಿದ ನಂತರ, ನನಗೆ ಇಲ್ಲಿ ಬಂದು ಪ್ರಾರ್ಥಿಸಬೇಕೆನಿಸಿತ್ತು" ಎಂದು ಹೇಳಿದರು.
ಈ ದೇವಾಲಯದಲ್ಲಿ ನೆರದಿದ್ದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸದಾ ಮಾತೆ ಮರಿಯಮ್ಮನವರು ಹೇಳುವುದನ್ನು ಆಲಿಸಿರಿ ಎಂದು ಹೇಳಿದರು.