ಪೋಪ್ ಹದಿನಾಲ್ಕನೇ ಲಿಯೋ ಅವರನ್ನು ಸ್ವಾಗತಿಸಿದ ಆರ್ಚ್'ಬಿಷಪ್ ಬ್ರೋಲಿಯೊ
ವರದಿ: ವ್ಯಾಟಿಕನ್ ನ್ಯೂಸ್
ಅಮೇರಿಕಾದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯ ಅಧ್ಯಕ್ಷರಾದ ಆರ್ಚ್'ಬಿಷಪ್ ತಿಮೊಥಿ ಬ್ರೋಲಿಯೊ ಅವರು ಕಾರ್ಡಿನಲ್ ರಾಬರ್ಟ್ ಪ್ರಿವೋಸ್ಟ್ ಅವರು ಪೋಪ್ ಹದಿನಾಲ್ಕನೇ ಲಿಯೋ ರವರಾಗಿ ಆಯ್ಕೆಯಾಗಿರುವುದನ್ನು ಸ್ವಾಗತಿಸಿದ್ದಾರೆ. "ಸಮಸ್ಯಾತ್ಮಕ ಜಗತ್ತಿಗೆ ಕುರಿಗಾಹಿಯೊಬ್ಬರು ಸಿಕ್ಕಿದ್ದಾರೆ" ಎಂದು ಹೇಳಿದ್ದಾರೆ.
ಸಂತ ಪೇತ್ರರ ಮಹಾದೇವಾಲಯದ ಉಪ್ಪರಿಗೆಯಿಂದ ವ್ಯಾಟಿಕನ್ ನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅಮೇರಿಕಾದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯ ಅಧ್ಯಕ್ಷರಾದ ಆರ್ಚ್'ಬಿಷಪ್ ತಿಮೊಥಿ ಬ್ರೋಲಿಯೊ ಅವರು "ಕಾರ್ಡಿನಲ್ಲುಗಳ ಆಯ್ಕೆಯಿಂದ ನನಗೆ ಸಂತೋಷವಾಗಿದೆ" ಎಂದು ಹೇಳಿದರು. ಮುಂದುವರೆದು ಮಾತನಾಡಿದರು ಅವರು ಮೊದಲಿಗೆ ನೂತನ ಪೋಪ್ ಆಯ್ಕೆಅಚ್ಚರಿ ತಂದಿದೆ ಎಂದು ಹೇಳಿದರು. "ಖಂಡಿತ ನಾನು ಪೋಪ್ ಲಿಯೋ ಅವರಿಗಾಗಿ ಪ್ರಾರ್ಥಿಸುತ್ತೇನೆ. ಅವರು ಆರಂಭಿಸಿರುವ ಸೇವಾಕಾರ್ಯವು ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.
ಅಮೇರಿಕಾದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯ ಅಧ್ಯಕ್ಷರಾಗಿ ವಿವಿಧ ಕಾರ್ಯಗಳ ನಿಮಿತ್ತ ರೋಮ್ ನಗರಕ್ಕೆ ಆಗಮಿಸುವಾಗ ಆರ್ಚ್'ಬಿಷಪ್ ಬ್ರೋಲಿಯೊ ಅವರು ಅನೇಕ ಬಾರಿ ಪೋಪ್ ಲಿಯೋ (ಅಂದಿನ ಕಾರ್ಡಿನಲ್ ಪ್ರಿವೋಸ್ಟ್) ಅವರನ್ನು ಭೇಟಿ ಮಾಡುತ್ತಿದ್ದರು ಎಂದು ಹೇಳಿದ್ದು, ಪೋಪ್ ಲಿಯೋ ಅವರು ಪ್ರಾಮಾಣಿಕ ಸೇವಾ ಮನೋಭಾವದ ವ್ಯಕ್ತಿ, ಇತರರೊಂದಿಗೆ ಸಂವಾದಿಸುವ ಹಾಗೂ ಸಹಯೋಗದಲ್ಲಿ ಕಾರ್ಯನಿರ್ವಹಿಸಿರುವ ಗುಣಗಳನ್ನು ಹೊಂದಿರುವ ವ್ಯಕ್ತಿ ಎಂದು ಹೇಳಿದ್ದಾರೆ.
ಲಿಯೋ ಎಂಬ ಹೆಸರಿನ ಇತಿಹಾಸ
ನೂತನ ವಿಶ್ವಗುರುಗಳು ಲಿಯೋ ಎಂಬ ಹೆಸರನ್ನು ಆರಿಸಿಕೊಂಡಿರುವ ಕುರಿತು ಮಾತನಾಡಿದ ಆರ್ಚ್'ಬಿಷಪ್ ಬ್ರೊಲಿಯೋ ಅವರು "ಇದು ನಮಗೆ ಪೋಪ್ ಹದಿಮೂರನೇ ಲಿಯೋ ಅವರ ಅತ್ಯದ್ಭುತ ಕಾರ್ಯವನ್ನು ನೆನಪಿಸುತ್ತದೆ. ಪೋಪ್ ಹದಿಮೂರನೇ ಲಿಯೋ ಅವರು ಮೊಟ್ಟ ಮೊದಲ ಬಾರಿಗೆ ಆಧುನಿಕ ಜಗತ್ತಿನಲ್ಲಿ ಧರ್ಮಸಭೆಯ ಸಾಮಾಜಿಕ ಧರ್ಮೋಪದೇಶ ಹೇಗಿರಬೇಕು ಎಂದು ಹೇಳಿ "ಪ್ರೇಷಿತ ದಾಖಲೆ "ರೇರುಮ್ ನೊವಾರುಮ್" ಅನ್ನು ಬಿಡುಗಡೆ ಮಾಡಿದರು. ಮುಂದುವರೆದು, ಪೋಪ್ ಹದಿಮೂರನೇ ಲಿಯೋ ಅವರು ರೋಮ್ ನಗರದ ಆಸುಪಾಸಿನಿಂದ ಬಂದವರಾದ ಕಾರಣ, ಇದು ರೋಮ್ ಜನತೆಗೆ ಸಂತೋಷದಾಯಕ ವಿಚಾರವಾಗಿರಬಹುದು" ಎಂದು ಹೇಳಿದರು.
ಶಾಂತಿಗೆ ಕರೆ, ಧರ್ಮಸಭೆಯಲ್ಲಿ ಐಕ್ಯತೆ, ಎಲ್ಲರ ಕುರಿಗಾಹಿ
ಮುಂದುವರೆದು ಮಾತನಾಡಿದ ಆರ್ಚ್'ಬಿಷಪ್ ಬ್ರೋಲಿಯೊ ಅವರು ನೂತನ ವಿಶ್ವಗುರುಗಳಾದ ಹದಿನಾಲ್ಕನೇ ಲಿಯೋ ಅವರು ಪ್ರಸ್ತುತ ಸಮಸ್ಯಾತ್ಮಕ ಜಗತ್ತಿನಲ್ಲಿ ಶಾಂತಿಯ ಧ್ವನಿಯಾಗಬೇಕು, ಧರ್ಮಸಭೆಯಲ್ಲಿ ಐಕ್ಯತೆಯನ್ನು ಮೂಡಿಸಿ, ಕಾಪಾಡುವ ತಂದೆಯಾಗಬೇಕು ಹಾಗೂ ಈ ಜಗತ್ತಿನ ಎಲ್ಲರ ಕುರಿಗಾಹಿಯಾಗಬೇಕು ಎಂದು ಹೇಳಿದ್ದಾರೆ.