ಪೋಪ್ ಲಿಯೋ XIV: ಇನ್ನೆಂದಿಗೂ ಯುದ್ಧ ಬೇಡ
ವರದಿ: ವ್ಯಾಟಿಕನ್ ನ್ಯೂಸ್
ಇಂದು ರೆಜೀನಾ ಶೇಲಿ ಪ್ರಾರ್ಥನೆಯ ನಂತರ ಪೋಪ್ ಹದಿನಾಲ್ಕನೇ ಲಿಯೋ ಅವರು ಜಗತ್ತಿನಲ್ಲಿ ಪ್ರಸ್ತುತ ನಡೆಯುತ್ತಿರುವ ಯುದ್ಧ ಸನ್ನಿವೇಷಗಳ ಕುರಿತು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಉಕ್ರೇನ್, ಗಾಝಾ ಸೇರಿದಂತೆ ಭಾರತ-ಪಾಕಿಸ್ತಾನ ನಡುವಿನ ಗಡಿರೇಖೆ ಸಂಘರ್ಷಗಳ ಕುರಿತೂ ಸಹ ಮಾತನಾಡಿ, ಶಾಂತಿಗಾಗಿ ಮನವಿ ಮಾಡಿದ್ದಾರೆ.
ಇಂದು ಪ್ರಥಮ ಬಾರಿಗೆ ಸಂತ ಪೇತ್ರರ ಮಹಾದೇವಾಲಯದ ಮುಖ್ಯ ಉಪ್ಪರಿಗೆಯಿಂದ ಪೋಪ್ ಹದಿನಾಲ್ಕನೇ ಸಿಂಹನಾಥರು (ಲಿಯೋ) ರೆಜೀನಾ ಶೇಲಿ ಪ್ರಾರ್ಥನೆಯನ್ನು ಮುನ್ನಡೆಸಿದರು. ಪೋಪರ ಜೊತೆಗೂಡಿ ಪ್ರಾರ್ಥಿಸಲು ಇಡೀ ಸಂತ ಪೇತ್ರರ ಚೌಕದ ತುಂಬಾ ಭಕ್ತಾಧಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು.
"ಮೂರನೇ ವಿಶ್ವಯುದ್ಧವು ಕೊಂಚ ಕೊಂಚವೇ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಜಗತ್ತಿನಲ್ಲಿ ಶಕ್ತಿಶಾಲಿ ಎನಿಸಿಕೊಂಡವರಿಗೆ ನಾನು ಮನವಿ ಮಾಡುವುದು ಒಂದೇ: ಅದು "ಎಂದಿಗೂ ಯುದ್ಧ ಬೇಡ" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ರೆಜೀನಾ ಶೇಲಿ ಪ್ರಾರ್ಥನೆಯ ನಂತರ ಹೇಳಿದ್ದಾರೆ.
ಎಂಬತ್ತು ವರ್ಷಗಳ ಹಿಂದೆ ಎರಡನೇ ವಿಶ್ವಯುದ್ಧವು ಕೊನೆಗೊಂಡಿತು. ಆದರೆ, ಲಕ್ಷಾಂತರ ಜನರನ್ನು ಕೊಂದಿತು ಎಂದು ಹೇಳಿದರು ಅವರು ಮುಂದೆ ಇದು ಎಂದಿಗೂ ಮುಂದುವರೆಯಬಾರದು. "ಯುದ್ಧಖೈದಿಗಳು ಬಿಡುಗಡೆಯಾಗಬೇಕು; ಮಕ್ಕಳು ಮರಳಿ ತಮ್ಮ ಕುಟುಂಬಗಳಿಗೆ ತೆರಳಬೇಕು" ಎಂದು ಹೇಳಿದರು. ಪೋಪ್ ಲಿಯೋ ಅವರು ಇದೇ ಸಂದರ್ಭದಲ್ಲಿ ಉಕ್ರೇನ್ ಹಾಗೂ ಗಾಝಾ ದೇಶಗಳನ್ನು ನೆನಪಿಸಿಕೊಂಡು, ಅವರಿಗಾಗಿ ಪ್ರಾರ್ಥಿಸುವಂತೆ ಭಕ್ತಾಧಿಗಳಿಗೆ ಮನವಿ ಮಾಡಿದರು.
ಇದೇ ವೇಳೆ ಪೋಪ್ ಲಿಯೋ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ಪ್ರಸ್ತಾಪಿಸಿ "ಭಾರತ ಮತ್ತು ಪಾಕಿಸ್ತಾನಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂಬುದು ಬಹಳ ಸಂತೋಷದಾಯಕ ಸಂಗತಿ. ಮುಂದಿನ ಮಾತುಕತೆಗಳಲ್ಲಿ ಈ ಸಂಘರ್ಷಕ್ಕೆ ಎರಡೂ ದೇಶಗಳು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲಿ ಎಂದು ನಾನು ಹೃದಯಾಂತರಾಳದ ಮನವಿಯನ್ನು ಮಾಡುತ್ತೇನೆ ಎಂದು ಹೇಳಿದರು.
ಅಂತಿಮವಾಗಿ ಅವರು ತಮ್ಮ ಹೃದಯಾಂತರಾಳದ ಮನವಿಯನ್ನು ಶಾಂತಿಯ ರಾಣಿ ಮಾತೆ ಮರಿಯಮ್ಮನವರಿಗೆ ಸಮರ್ಪಿಸಿದರು ಹಾಗೂ ಕ್ರಿಸ್ತರಿಂದ ಶಾಂತಿಯ ಅದ್ಭುತಕ್ಕಾಗಿ ಪ್ರಾರ್ಥಿಸುವಂತೆ ಬೇಡಿಕೊಂಡರು.