MAP

ಪೆರುವಿನಲ್ಲಿ ಪೋಪರ ಸುವಾರ್ತಾ ಪ್ರಸಾರ ಅನುಭವ ಅವರ ಪ್ರೇಷಿತಾಧಿಕಾರಕ್ಕೆ ಉಡುಗೊರೆ

ಪೆರು ದೇಶದ ಪ್ರೇಷಿತ ರಾಯಭಾರಿಗಳು ಪೆರು ಹಾಗೂ ಪೋಪ್ ಲಿಯೋ ಅವರ ನಡುವಿನ ಸಂಪರ್ಕ ಕೊಂಡಿಗಳ ಕುರಿತು ಚರ್ಚಿಸಿದ್ದಾರೆ. ಪೋಪ್ ಹದಿನಾಲ್ಕನೇ ಲಿಯೋ ಅವರು ಸುಮಾರು 20 ವರ್ಷಗಳ ಕಾಲ ಪೆರು ದೇಶದಲ್ಲಿ ಸುವಾರ್ತಾ ಪ್ರಸಾರಕರಾಗಿ, ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ವರದಿ: ವ್ಯಾಟಿಕನ್ ನ್ಯೂಸ್

ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಅವರು ಪೋಪ್ ಆಗಿ ಚುನಾಯಿತರಾಗಿರುವುದು ಪೆರುವಿನಾದ್ಯಂತ ಸಂತೋಷದ ವಿಚಾರವಾಗಿದೆ. ನೂತನ ಪೋಪರ ಸೇವೆ ಹಾಗೂ ಜೀವನವನ್ನು ಪೆರು ದೇಶವು ಹಂಚಿಕೊಂಡಿದೆ. ಪೆರು ದೇಶಕ್ಕೆ ಪ್ರೇಷಿತ ರಾಯಭಾರಿಯಾಗಿರುವ ಆರ್ಚ್’ಬಿಷಪ್ ಪೌಲೋ ರೊಕ್ಕೋ ಗ್ವಾಲ್ತಿಯೇರಿ ಅವರು ನೂತನ ಪೋಪರ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು, ಪೆರು ದೇಶದೆಡೆಗಿನ ಅವರ ಆಳವಾದ ಸಂಪರ್ಕ ಹಾಗೂ ಸುವಾರ್ತಾ ಪ್ರಸಾರ ಅನುಭವ ಅವರ ಪ್ರೇಷಿತಾಧಿಕಾರವನ್ನು ಮತ್ತಷ್ಟು ಫಲಪ್ರದಗೊಳಿಸುತ್ತದೆ ಎಂದು ಹೇಳಿದ್ದಾರೆ.

“ನೂತನ ಪೋಪರ ಆಯ್ಕೆಯಿಂದ ಪೆರು ಹರ್ಷಿಸುತ್ತಿದೆ. ಏಕೆಂದರೆ ಅವರು ತಮ್ಮ ಜೀವನದ ಬಹುಭಾಗವನ್ನು ಇಲ್ಲಿ ಕಳೆದಿದ್ದಾರೆ. ಯುವ ಯಾಜಕರಾಗಿ ಇಲ್ಲಿಗೆ ಬಂದ ಅವರು ಸುವಾರ್ತಾ ಪ್ರಸಾರಕರಾಗಿ, ಇಲ್ಲಿನ ಮೇಜರ್ ಸೆಮಿನರಿಯಲ್ಲಿ ಕ್ಯಾನನ್ ಲಾ ಪ್ರಾಧ್ಯಾಪಕರಾಗಿ, ಚಿಲ್ಕಾಯೋ ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಹಾಗೂ ಧರ್ಮಾಧ್ಯಕ್ಷರಾಗಿ ತಮ್ಮ ಹೃದಯವನ್ನೇ ಪೆರು ದೇಶಕ್ಕೆ ನೀಡಿದ್ದಾರೆ.” ಎಂದು ಪೆರು ದೇಶಕ್ಕೆ ಪ್ರೇಷಿತ ರಾಯಭಾರಿಯಾಗಿರುವ ಆರ್ಚ್’ಬಿಷಪ್ ಪೌಲೋ ರೊಕ್ಕೋ ಗ್ವಾಲ್ತಿಯೇರಿ ಅವರು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಪೆರು ದೇಶಕ್ಕೆ ಪ್ರೇಷಿತ ರಾಯಭಾರಿಯಾಗಿರುವ ಆರ್ಚ್’ಬಿಷಪ್ ಪೌಲೋ ರೊಕ್ಕೋ ಗ್ವಾಲ್ತಿಯೇರಿ ಅವರು “ಸಂಕಷ್ಟದ ಸಮಯದಲ್ಲಿ ಅಂದರೆ ಕೊರೋನಾ ಸಾಂಕ್ರಮಿಕ ಹಾಗೂ ಎಲ್ ನೀನೋ ಚಂಡಮಾರುತ ಉಂಟು ಮಾಡಿದ ಪ್ರವಾಹದ ಸಂದರ್ಭದಲ್ಲಿ ಅವರು ಪೆರು ದೇಶಕ್ಕೆ ನೀಡಿದ ಸೇವೆ ಅನುಪಮವಾಗಿದೆ ಹಾಗೂ ಎಂದಿಗೂ ಮರೆಲಾಗದಂತದ್ಧಾಗಿದೆ” ಎಂದು ನೆನಪಿಸಿಕೊಂಡರು.

“ನನಗಿನ್ನು ನೆನಪಿದೆ. ಅವರು ಕಾರ್ಡಿನಲ್ ಆದ ನಂತರ ಮೊದಲ ಬಾರಿಗೆ ಪೆರು ದೇಶಕ್ಕೆ ಭೇಟಿ ನೀಡಿದಾಗ ಅವರಿಗೆ ದೊರಕಿದ ಸ್ವಾಗತವನ್ನು ಕಂಡು ಇವರು ನಿಜವಾಗಿಯೂ ಜನರ ನಡುವಿನ, ಅವರ ಜೊತೆ ನಡೆದ ಗುರು ಎಂದು ನನಗೆ ಅನಿಸಿತು. ಅಷ್ಟರ ಮಟ್ಟಿಗೆ ಇಲ್ಲಿನ ಜನತೆ ಅವರನ್ನು ಪ್ರೀತಿಸುತ್ತಾರೆ. ಅವರನ್ನು ಇಷ್ಟಪಡುತ್ತಾರೆ” ಎಂದು ಆರ್ಚ್’ಬಿಷಪ್ ಗ್ವಾಲ್ತಿಯೇರಿ ಹೇಳಿದರು.

ಅಂತಿಮವಾಗಿ “ಪೋಪ್ ಹದಿನಾಲ್ಕನೇ ಲಿಯೋ ಅವರು ಪ್ರೇಷಿತಾಧಿಕಾರವು ಐಕ್ಯತೆ, ಸಿನೋಡಲ್ ಹಾದಿ ಹಾಗೂ ಸೇತುವೆಗಳನ್ನು ನಿರ್ಮಿಸುವ ಕಾಯಕಗಳನ್ನು ಹೆಚ್ಚು ಒಳಗೊಳ್ಳುತ್ತದೆ. ಅವರೇ ಹೇಳುವಂತೆ ಧರ್ಮಸಭೆಯು ಕತ್ತಲೆಯ ಈ ಜಗತ್ತಿಗೆ ಬೆಳಕನ್ನಿ ನೀಡಬೇಕು ಹಾಗೂ ಆ ದಿಶೆಯಲ್ಲಿ ಮುಂದುವರೆಯಬೇಕು” ಎಂದು ಹೇಳಿದರು.

17 ಮೇ 2025, 15:01