MAP

ಕಾರ್ಡಿನಲರಿಗೆ ಪೋಪ್ ಲಿಯೋ XIV: ಕ್ರಿಸ್ತರಲ್ಲಿನ ನಮ್ಮ ಸಂತೋಷದ ವಿಶ್ವಾಸಕ್ಕೆ ನಾವು ಸಾಕ್ಷಿಗಳಾಗಬೇಕು

267ನೇ ವಿಶ್ವಗುರುವಾಗಿ ಚುನಾಯಿತವಾದ ಮರುದಿನ ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದು ಸಿಸ್ಟೀನ್ ಪ್ರಾರ್ಥನಾಲಯದಲ್ಲಿ ಕಾರ್ಡಿನಲರುಗಳೊಂದಿಗೆ ಪ್ರಥಮ ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಕ್ರಿಸ್ತರಲ್ಲಿನ ನಮ್ಮ ಸಂತೋಷದ ವಿಶ್ವಾಸಕ್ಕೆ ನಾವು ಸಾಕ್ಷಿಗಳಾಗಬೇಕು ಎಂದು ಹೇಳಿದ್ದಾರೆ. ಇದೇ ವೇಳೆ, ನಮ್ಮ ವಿಶ್ವಾಸ ಕುಂದಿದರೆ, ನಮ್ಮ ಬದುಕು ಅರ್ಥವನ್ನು ಕಳೆದುಕೊಳ್ಳುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

267ನೇ ವಿಶ್ವಗುರುವಾಗಿ ಚುನಾಯಿತವಾದ ಮರುದಿನ ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದು ಸಿಸ್ಟೀನ್ ಪ್ರಾರ್ಥನಾಲಯದಲ್ಲಿ ಕಾರ್ಡಿನಲರುಗಳೊಂದಿಗೆ ಪ್ರಥಮ ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಕ್ರಿಸ್ತರಲ್ಲಿನ ನಮ್ಮ ಸಂತೋಷದ ವಿಶ್ವಾಸಕ್ಕೆ ನಾವು ಸಾಕ್ಷಿಗಳಾಗಬೇಕು ಎಂದು ಹೇಳಿದ್ದಾರೆ. ಇದೇ ವೇಳೆ, ನಮ್ಮ ವಿಶ್ವಾಸ ಕುಂದಿದರೆ, ನಮ್ಮ ಬದುಕು ಅರ್ಥವನ್ನು ಕಳೆದುಕೊಳ್ಳುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

"ಎಂದಿಗೂ ನಾವು ಕ್ರಿಸ್ತರೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಹಾತೊರೆಯಬೇಕು. ವಿಫಲವಾದರೂ ಸಹ ನಮ್ಮ ಪ್ರಯತ್ನಗಳನ್ನು ಮಾಡುತ್ತಿರಬೇಕು. ಏಕೆಂದರೆ, ಒಮ್ಮೆ ನಮ್ಮ ವಿಶ್ವಾಸ ಕ್ಷೀಣಿಸಿದರೆ, ನಮ್ಮ ಬದುಕು ಅರ್ಥವನ್ನು ಕಳೆದುಕೊಳ್ಳುತ್ತದೆ" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಹೇಳಿದ್ದಾರೆ.

ಪ್ರಬೋಧನೆಯ ಆರಂಭದಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರು ಒಂದೆರಡು ಮಾತುಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಹೇಳಿದರು. ಈ ವೇಳೆ ಅವರು ಎಲ್ಲಾ ಕಾರ್ಡಿನಲರಿಗೆ ಧನ್ಯವಾದಗಳನ್ನು ತಿಳಿಸಿದರು. "ಇಂದಿನ ಮೊದಲ ವಾಚನದ ಶ್ಲೋಕದ ಸಾಲುಗಳನ್ನು ನಾನು ಪುನರಾವರ್ತಿಸಲು ಬಯಸುತ್ತೇನೆ: "ಪ್ರಭುವಿಗೆ ನಾನು ಹೊಸ ಗೀತೆಯೊಂದನು ಹಾಡುತ್ತೇನೆ ಏಕೆಂದರೆ ಅವರು ನನ್ನ ಬದುಕಿನಲ್ಲಿ ಮಹತ್ಕಾರ್ಯಗಳನ್ನು ಮಾಡಿದ್ದಾರೆ. ಹೌದು, ನನಗೆ ಮಾತ್ರವಲ್ಲ; ನಮ್ಮೆಲ್ಲರಿಗೂ ಪ್ರಭು ಮಹತ್ಕಾರ್ಯಗಳನ್ನು ಮಾಡಿದ್ದಾರೆ" ಎಂದು ವಿಶ್ವಗುರುಗಳು ಹೇಳಿದರು.

ಮುಂದುವರೆದು ಮಾತನಾಡಿದ ಅವರು "ನನ್ನ ಸಹೋದರ ಕಾರ್ಡಿನಾಲರೇ, ಈ ದಿವ್ಯ ಬಲಿಪೂಜೆಯಲ್ಲಿ ಪ್ರಭು ನಮ್ಮೆಲ್ಲರ ಬದುಕಿನಲ್ಲಿ ಮಾಡಿರುವ ಎಲ್ಲಾ ಮಹತ್ಕಾರ್ಯಗಳನ್ನು ನೆನೆದು, ಅವರಿಗೆ ಧನ್ಯವಾದವನ್ನು ಅರ್ಪಿಸೋಣ" ಎಂದು ಹೇಳಿದರು.

ಇಟಾಲಿಯನ್ ಭಾಷೆಯಲ್ಲಿ ಪ್ರಬೋಧನೆಯನ್ನು ಆರಂಭಿಸಿದ ಪೋಪ್ ಹದಿನಾಲ್ಕನೇ ಲಿಯೋ ಅವರು ಸಂತ ಪೇತ್ರರ ಕುರಿತು ಮಾತನಾಡಿದರು. ಸಂತ ಪೇತ್ರರು ಕ್ರಿಸ್ತರೊಂದಿಗೆ ಹೊಂದಿದ್ದ ಭಾಂದವ್ಯದ ಕುರಿತು ಮಾತನಾಡುತ್ತಾ, ಶುಭ ಸಂದೇಶದ ಹಲವು ಸನ್ನಿವೇಷಗಳನ್ನು ಉಲ್ಲೇಖಿಸಿದರು. ಇದೇ ವೇಳೆ ತಮ್ಮ ಚುನಾವಣೆಯ ಕುರಿತು ಮಾತನಾಡಿ, ಪ್ರಭು ನನ್ನನ್ನು ಸಂತ ಪೇತ್ರರ ಉತ್ತರಾಧಿಕಾರಿಯನ್ನಾಗಿ ನಿಮ್ಮ ಮೂಲಕ ಅಯ್ಕೆ ಮಾಡಿದ್ದಾರೆ. ನಿಮ್ಮೆಲ್ಲರ ನೆರವಿನೊಂದಿಗೆ, ನಿಮ್ಮ ಜೊತೆ ನಾನು, ನನ್ನ ಜೊತೆ ನೀವು ಪಯಣಿಸುತ್ತಾ, ನಾವೆಲ್ಲರೂ ಒಟ್ಟಾಗಿ ನಡೆಯೋಣ ಎಂದು ಕಾರ್ಡಿನಲರುಗಳಿಗೆ ಕರೆ ನೀಡಿದರು.

ಮುಂದುವರೆದು ಪೋಪ್ ಹದಿನಾಲ್ಕನೇ ಲಿಯೋ ಅವರು ಶುಭಸಂದೇಶ ಪ್ರಸಾರ ಕಾರ್ಯಗಳ ಕುರಿತು ಮಾತನಾಡಿದರು. ಇಂದು ಶುಭ ಸಂದೇಶವನ್ನು ಅಸಡ್ಡೆಯಾಗಿ / ಕ್ರೈಸ್ತ ವಿಶ್ವಾಸವನ್ನು ಅಸಡ್ಡೆಯಾಗಿ ನೋಡುವ ಸ್ಥಳಗಳು ನಮ್ಮ ಜಗತ್ತಿನಲ್ಲಿ ಬಹಳ ಇವೆ. ಈ ಸ್ಥಳಗಳಲ್ಲಿ ಕ್ರೈಸ್ತ ವಿಶ್ವಾಸ ಎಂಬುದು ಕೇವಲ ಬಲಹೀನರಿಗೆ ಹಾಗೂ ಕನಿಷ್ಟ ಬುದ್ಧಿಯವರಿಗೆ ಎಂಬ ನಂಬಿಕೆ ಇದೆ. ಈ ನಿಟ್ಟಿನಲ್ಲಿ ನಾವು ಇನ್ನಷ್ಟು ಧೈರ್ಯದಿಂದ ಶುಭ ಸಂದೇಶವನ್ನು ಸಾರಬೇಕು ಹಾಗೂ ಕ್ರಿಸ್ತರ ಶುಭಸಂದೇಶಕ್ಕೆ ಸಾಕ್ಷಿಗಳಾಗಬೇಕು ಎಂದು ನೂತನ ಪೋಪರು ನುಡಿದರು.

ಅಂತಿಮವಾಗಿ, ಯೇಸುಕ್ರಿಸ್ತರು ನನಗೆ ಇಂದು ಹಾಗೂ ಎಂದೆಂದಿಗೂ ಧರ್ಮಸಭೆಯ ಮಾತೆಯಾದ ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಯ ಮೂಲಕ ಧರ್ಮಸಭೆಯನ್ನು ಮುನ್ನಡೆಸುವ ಸುಜ್ಞಾನವನ್ನು ನೀಡಲಿ ಎಂದು ತಮ್ಮ ಪ್ರಬೋಧನೆಯನ್ನು ಮುಕ್ತಾಯಗೊಳಿಸಿದರು.

09 ಮೇ 2025, 12:56