ಸಂಪಾದಕೀಯ: ಧರ್ಮಸಭೆ ಸ್ವಲ್ಪ ಐಕ್ಯತೆ ಮತ್ತು ಪ್ರೀತಿಯ " ಹಿಟ್ಟಾಗಬೇಕು" - ಪೋಪ್ ಲಿಯೋ ಕರೆ
ವರದಿ: ಅಂದ್ರೇಯ ತೋರ್ನಿಯೆಲ್ಲಿ
"ನನ್ನ ಯಾವುದೇ ಶ್ರೇಷ್ಠತೆ ಇಲ್ಲದೆ ನನ್ನನ್ನು ಆಯ್ಕೆ ಮಾಡಲಾಗಿದೆ. ಈಗ, ಭಯ ಮತ್ತು ನಡುಕದಿಂದ ನಾನು ನಿಮ್ಮ ಸಹೋದರನಾಗಿ ನಿಮ್ಮ ಮುಂದಿದ್ದೇನೆ. ನಿಮ್ಮ ವಿಶ್ವಾಸ ಹಾಗೂ ದೈವಿಕ ಆನಂದದ ಸೇವಕನಾಗಿರಲು ನಾನು ಬಯಸುತ್ತೇನೆ. ನಿಮ್ಮೊಂದಿಗೆ ದೇವರ ಪ್ರೀತಿಯ ಹಾದಿಯಲ್ಲಿ ನಡೆಯುತ್ತೇನೆ ಏಕೆಂದರೆ ದೇವರಿಗೆ ನಾವು ಸದಾ ಐಕ್ಯತೆಯಿಂದರಬೇಕು."
ಭಾನುವಾರ, ಮೇ 18 ರಂದು ಪೋಪ್ ಹದಿನಾಲ್ಕನೇ ಲಿಯೋ ಅವರು ತಮ್ಮ ಪ್ರೇಷಿತಾಧಿಕಾರದ ಉದ್ಘಾಟನೆಯ ಬಲಿಪೂಜೆಯಲ್ಲಿ ತಮ್ಮ ಕುರಿತು ಈ ಮಾತುಗಳನ್ನು ಹೇಳಿದ್ದಾರೆ. ಅವರು ಸುವಾರ್ತಾ ಪ್ರಸಾರ ಧರ್ಮಾಧ್ಯಕ್ಷರಾಗಿದ್ದು, ವಲಸಿಗರ ಮೊಮ್ಮಗನಾಗಿದ್ದಾರೆ ಹಾಗೂ ರೋಮ್ ಧರ್ಮಕ್ಷೇತ್ರದ 267ನೇ ಧರ್ಮಾಧ್ಯಕ್ಷರಾಗಿದ್ದಾರೆ.
ಬಲಿಪೂಜೆಯಲ್ಲಿ ಪೋಪರ ಆಡಿರುವ ಈ ಮಾತುಗಳು ಮುಂದೆ ಅವರ ಪ್ರೇಷಿತಾಧಿಕಾರ ಯಾವ ರೀತಿಯಲ್ಲಿರಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಮಾತುಗಳಿಂದ ಪೋಪರ ಆಧ್ಯತೆಗಳೇನು ಎಂಬುದನ್ನು ನಾವು ಸ್ಥೂಲವಾಗಿ ಅರ್ಥಮಾಡಿಕೊಳ್ಳಬೇಕಿದೆ. ಅವರ ಮಾತುಗಳಲ್ಲಿ ನಾವು "ಇತರೆ" ಭಾವವನ್ನು ಗುರುತಿಸಬಹುದು. ಏಕೆಂದರೆ, ಈ ನಮ್ಮ ಜಗತ್ತು ಈಗಾಲೇ ಹಲವು ಯುದ್ಧಗಳು, ಹಿಂಸೆಗಳು, ವಿಭಜನೆ ಹಾಗೂ ದ್ವೇಷದಿಂದ ತುಂಬಿ ಹೋಗಿದೆ. ಇಂತಹ ಜಗತ್ತಿನಲ್ಲಿ ಸಂತ ಪೇತ್ರರ ಉತ್ತರಾಧಿಕಾರಿಯ ಮಾತುಗಳು ಸಹನೆ, ಶಾಂತಿ, ಪ್ರೀತಿ, ದೈವ ವಿಶ್ವಾಸ, ಐಕ್ಯತೆ ಮುಂತಾದ ಮಾನವೀಯ ಗುಣಗಳ ಕುರಿತು ಚಿಂತನೆಯನ್ನು ವ್ಯಕ್ತಪಡಿಸುತ್ತಿವೆ.
ಪೋಪ್ ಹದಿನಾಲ್ಕನೇ ಲಿಯೋ ಅವರ ಈ ಮಾತುಗಳು ಜನರ ನಡುವೆ ಪ್ರೀತಿಯನ್ನು ಬಿತ್ತಬೇಕು, ಯಾವುದೇ ವಿಭಜನಾತ್ಮಕ ಭಾವಗಳಿಲ್ಲದೆ ಎಲ್ಲರೂ ಸಹ ಮಾನವೀಯತೆಯಿಂದ ಪರಸ್ಪರರಿಗೆ ನೆರವಾಗಬೇಕು. ಮಾನವ ಹೃದಯದಲ್ಲಿ ಜನ್ಮ ತಳೆಯುವ ಯುದ್ಧ ಎಂಬುದು ಕೊನೆಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಕರೆ ನೀಡುತ್ತವೆ.
ಅವರ ಶೈಲಿಯೂ ಸಹ ವಿಭಿನ್ನವಾಗಿದೆ ಏಕೆಂದರೆ ಅವರು "ಸಂತ ಪೇತ್ರರ ಉತ್ತರಾಧಿಕಾರಿಯ ಕೆಲಸ ದೇವರ ಸೇವಕರ ಸೇವಕನಾಗುವುದು" ಎಂದು ಹೇಳಿದ್ದಾರೆ. ರೋಮನ್ ಕಥೋಲಿಕ ಧರ್ಮಸಭೆ ಎಂಬುದು ದಾನಶೀಲತೆಯ ಬುನಾದಿಯ ಮೇಲೆ ಇದ್ದು, ಈ ದಾನಶೀಲತೆಯ ಬುನಾದಿಯೇ ಪ್ರಭು ಕ್ರಿಸ್ತರಾಗಿದ್ದಾರೆ ಎಂದು ಹೇಳುವ ಮೂಲಕ ತನ್ನ ಮುಖ್ಯ ಪಾಲನಾ ಕರ್ತವ್ಯ ಸೇವೆ ಎಂಬುದನ್ನು ಪೋಪ್ ಲಿಯೋ ಅವರು ನಿರೂಪಿಸಿದ್ದಾರೆ.
"ನಾವು ಯಾರನ್ನೂ ಸಹ ಬಲವಂತದಿಂದ, ಧಾರ್ಮಿಕ ಕಟ್ಟಳೆಗಳ ಮೂಲಕ ನಮ್ಮತ್ತ ಸೆಳೆಯಬಾರದು - ನಾವು ಜೀವಿಸುತ್ತಿರುವ ಕಾಲಘಟ್ಟವೇ ಹಾಗೆ - ಎಲ್ಲರನ್ನೂ ಬಲವಂತದಿಂದ ಅಥವಾ ಒಂದಲ್ಲ ಒಂದು ರೀತಿಯಲ್ಲಿ ತನ್ನತ್ತ ಸೆಳೆಯಬೇಕು ಎಂದುಕೊಳ್ಳುತ್ತದೆ" ಎಂದು ಅವರು ಹೇಳಿದ್ದಾರೆ.
"ಆದರೆ, ನಾವು ಮಾಡಬೇಕಿರುವುದು ಯೇಸು ಕ್ರಿಸ್ತರಂತೆ ಎಲ್ಲರನ್ನೂ ಪ್ರೀತಿಸುವುದು" ಎಂದು ಪೋಪ್ ಲಿಯೋ ಅವರು ಪ್ರೀತಿಯ ಪ್ರಾಮುಖ್ಯತೆಯ ಕುರಿತು ಹೇಳಿದ್ದಾರೆ. ಹೀಗೆ "ಪೇತ್ರನು ತನ್ನ ಸುಪರ್ದಿಯಲ್ಲಿರುವ ಕುರಿಮಂದೆಯನ್ನು ತಾನೇ ಅದರ ನಿರಂಕುಶ ಪ್ರಭು ಎಂದುಕೊಳ್ಳದೆ ಕಾಯ್ದು ಪೋಷಿಸಬೇಕು. ಅದೇ ಅವನ ಜವಾಬ್ದಾರಿಯಾಗಿದೆ" ಎಂದು ಹೇಳುವ ಮೂಲಕ ಪೋಪರ ಅಧಿಕಾರ ಎಂಬುದು ಸೇವೆ ಎಂದು ಅವರು ಹೇಳಿದ್ದಾರೆ.
"ಯಾವುದೇ ಕುರಿಗಾಹಿ, ಕುರಿಗಾಹಿಯ ಮುಂದೆ ಹೋಗಿ, ಅವುಗಳನ್ನು ಮುನ್ನಡೆಸಬೇಕು. ಇದೇ ಪೇತ್ರರ ಉತ್ತರಾಧಿಕಾರಿಯ ಕೆಲಸವೂ ಆಗಿದೆ" ಎಂದು ಹೇಳುವ ಮೂಲಕ ಪೋಪ್ ಲಿಯೋ ಅವರು ಸುವಾರ್ತಾ ಪ್ರಸಾರ ಧರ್ಮಾಧ್ಯಕ್ಷರಾಗಿ ತಮ್ಮ ಅನುಭವವನ್ನು ತಮ್ಮ ಪ್ರೇಷಿತ ಅಧಿಕಾರದಲ್ಲಿ ಅಳವಡಿಸಿಕೊಂಡು, ಸೇವಾ ಮನೋಭಾವದಲ್ಲಿ ಧರ್ಮಸಭೆಯನ್ನು ಮುನ್ನಡೆಸಲಿದ್ದಾರೆ.