ಲಸಾಲೆ ಸಹೋದರರಿಗೆ ಪೋಪ್: ಪರಿಶುದ್ಧತೆಯ ಆನಂದದ, ಫಲಪ್ರದಾಯಕ ಹಾದಿಗಳನ್ನು ಪ್ರೇರೇಪಿಸಿರಿ
ವರದಿ: ವ್ಯಾಟಿಕನ್ ನ್ಯೂಸ್
ಸಂತ ಜಾನ್ ಬ್ಯಾಪ್ಟಿಸ್ಟ್ ದೆ ಲಾ ಸಾಲ್ಲೆ ಅವರ "ನಿಮ್ಮ ಪೀಠವೇ ನಿಮ್ಮ ತರಗತಿಗಳು" ಎಂಬ ಸಾಲನ್ನು ನೆನಪಿಸುತ್ತಾ, ಪೋಪ್ ಹದಿನಾಲ್ಕನೇ ಲಿಯೋ ಅವರು ಶಿಕ್ಷಣಕ್ಕೆ ದೆ ಲಾ ಸಾಲ್ಲೆ ಸಹೋದರರು ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು. ಪರಿಶುದ್ಧತೆಯ ಆನಂದದ, ಫಲಪ್ರದಾಯಕ ಹಾದಿಗಳನ್ನು ಪ್ರೇರೇಪಿಸಿರಿ ಎಂದು ಅವರಿಗೆ ಕಿವಿಮಾತನ್ನು ಹೇಳಿದರು.
"ಲ ಸಾಲೆ ಸಭೆಗೆ ಹೆಚ್ಚು ದೈವಕರೆಗಳು ಸಿಗುವಂತಾಗಲಿ. ನಿಮ್ಮ ಶಾಲೆಗಳಲ್ಲಿ ಮಕ್ಕಳು ದೈವಕರೆಯನ್ನು ಹೊಂದಲು ಹೆಚ್ಚು ಹೆಚ್ಚು ಪ್ರೇರೇಪಣೆಯನ್ನು ಹೊಂದಲಿ; ತಮ್ಮೆಲ್ಲಾ ಶಿಕ್ಷಣ ಹಾಗೂ ಪರಿಶುದ್ಧತೆಯ ಜೀವನದ ಮೂಲಕ ಇತರೆ ಯುವ ಜನತೆಗೂ ಸಹ ಅವರು ಮಾದರಿಯಾಗುವಂತಾಗಲಿ" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಲ ಸಾಲೆ ಸಹೋದರರನ್ನು ಉದ್ದೇಶಿಸಿ ಮಾತನಾಡಿದರು.
ಸಂತ ಜಾನ್ ಬ್ಯಾಪ್ಟಿಸ್ಸ್ ದೆ ಲಾ ಸಾಲೆ ಅವರು ಸ್ಥಾಪಿಸಿರುವ ಸಭೆಯೇ ದೆ ಲಾ ಸಾಲೆ ಸಹೋದರರು (Institute of the Brothers of the Christian Schools). ಈ ಧಾರ್ಮಿಕ ಸಭೆಯ ಮುಖ್ಯ ಉದ್ದೇಶಯುವ ಜನತೆಗೆ ಹಾಗೂ ಮಕ್ಕಳಿಗೆ ಕ್ರೈಸ್ತ ಶಿಕ್ಷಣವನ್ನು ನೀಡುವುದು. ವಿಶೇಷವಾಗಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದು ಈ ಧಾರ್ಮಿಕ ಸಭೆಯ ಮುಖ್ಯ ಉದ್ದೇಶವಾಗಿದೆ.
ಮುಂದುವರೆದು ಮಾತನಾಡಿದ ಪೋಪ್ ಲಿಯೋ ಅವರು "ಮೂರು ಶತಮಾನಗಳ ನಂತರವೂ ಸಹ ಹೇಗೆ ನಿಮ್ಮ ಧಾರ್ಮಿಕ ಸಭೆಯು ಶೈಕ್ಷಣಿಕ ಪ್ರಸ್ತುತತೆಯನ್ನು ಕಾಯ್ದುಕೊಳ್ಳುತ್ತಾ, ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದೆ ಎಂಬುದನ್ನು ನೋಡುವಾಗ ಸೋಜಿಗವೆನಿಸುತ್ತದೆ. ಇಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದ ವಿವಿಧ ಭಾಗಗಳಲ್ಲಿ ನೀವು ಉತ್ಸಾಹ, ಸಮಗ್ರತೆ ಹಾಗೂ ತ್ಯಾಗದ ಮನೋಭಾವದಿಂದ ಶಿಕ್ಷಣವನ್ನು ನೀಡುತ್ತಿರುವುದು ನಿಮ್ಮ ಬದ್ಧತೆಗೆ ಸಾಕ್ಷಿಯಾಗಿದೆ" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಹೇಳಿದರು.
ಸಂತ ಜಾನ್ ಬ್ಯಾಪ್ಟಿಸ್ಟ್ ದೆ ಲಾ ಸಾಲೆ ಅವರ ಕುರಿತು ಮಾತನಾಡಿದ ಪೋಪ್ ಲಿಯೋ ಅವರು "ನಿಮ್ಮ ಸ್ಥಾಪಕ ಸಂತರು ತಮಗೆ ಬಂದ ಎಲ್ಲಾ ಸವಾಲುಗಳನ್ನು ದೇವರಿಂದ ಬಂದ ಸಂಕೇತ ಎಂದು ಭಾವಿಸಿ, ಮುನ್ನಡೆದರು. ತಮ್ಮದೇ ಆಲೋಚನೆ ಹಾಗೂ ಗುರಿಯನ್ನು ಹೊರತುಪಡಿಸಿ, ದೆ ಲಾ ಸಾಲೆ ಅವರು ಶಿಕ್ಷಣಕ್ಕೆ ಹೊಸ ಆಯಾಮವನ್ನು ನೀಡಿದರು" ಎಂದು ನೂತನ ಪೋಪ್ ಹದಿನಾಲ್ಕನೇ ಲಿಯೋ ಅವರು ನುಡಿದರು.
ಪೋಪ್ ಹದಿನಾಲ್ಕನೇ ಲಿಯೋ ಅವರು ಪ್ರಸ್ತುತ ಜಗತ್ತಿನಲ್ಲಿರುವ ವೈಯಕ್ತಿಕವಾದ, ಸ್ವಾರ್ಥ ಸೇರಿದಂತೆ ಮುಂತಾದ ಪ್ರಾಪಂಚಿಕ ಆಯಾಮಗಳು ಹೇಗೆ ನಮ್ಮ ಸೇವೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ಒತ್ತಿಹೇಳಿದರು. ಇದು ಇಂದಿನ ಮಕ್ಕಳಲ್ಲಿ, ಕುಟುಂಬಗಳಲ್ಲಿ ಬಹಳಷ್ಟು ಬೇಗ ಬೇರೂರುತ್ತಿದ್ದು, ಕ್ರಿಸ್ತೀಯ ಶಿಕ್ಷಣದ ಮೂಲಕ ನಾವು ಜನತೆಯನ್ನು ವಿಶೇಷವಾಗಿ ಯುವ ಜನತೆಯನ್ನು ಇದರಿಂದ ರಕ್ಷಿಸಬಹುದಾಗಿದೆ" ಎಂದು ಹೇಳಿದರು.
ಅಂತಿಮವಾಗಿ "ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ ಹಾಗೂ ನಿಮಗೆ ಪ್ರೇಷಿತ ಆಶೀರ್ವಾದವನ್ನು ನೀಡುತ್ತೇನೆ. ನಿಮಗೂ ನಿಮ್ಮ ಲ ಸಾಲೇ ಕುಟುಂಬಕ್ಕೂ ದೇವರ ತಮ್ಮ ವರದಾನಗಳನ್ನು ದಯಪಾಲಿಸಲಿ" ಎಂದು ಪೋಪ್ ಲಿಯೋ ಅವರು ನುಡಿದರು.