ಅಮೇರಿಕಾದ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಅವರನ್ನು ಭೇಟಿ ಮಾಡಿದ ಪೋಪ್ ಲಿಯೋ XIV
ವರದಿ: ವ್ಯಾಟಿಕನ್ ನ್ಯೂಸ್
ಭಾನುವಾರ ಪೋಪ್ ಹದಿನಾಲ್ಕನೇ ಲಿಯೋ ಅವರ ಪ್ರೇಷಿತಾಧಿಕಾರದ ಉದ್ಘಾಟನಾ ಬಲಿಪೂಜೆಗೆ ಆಗಮಿಸಿದ್ದ ಅಮೇರಿಕಾ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಹಾಗೂ ಅಮೇರಿಕಾದ ರಾಜ್ಯ ಕಾರ್ಯದರ್ಶಿ ಮಾರ್ಕೋ ರೂಬಿಯೋ ಅವರನ್ನು ಪೋಪ್ ಹದಿನಾಲ್ಕನೇ ಲಿಯೋ ಅವರು ವ್ಯಾಟಿಕನ್ನಿನಲ್ಲಿ ಖಾಸಗಿಯಾಗಿ ಭೇಟಿ ಮಾಡಿದ್ದಾರೆ ಎಂದು ವ್ಯಾಟಿಕನ್ನಿನ ಮಾಧ್ಯಮ ಕಚೇರಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಭಾನುವಾರ ಪೋಪ್ ಹದಿನಾಲ್ಕನೇ ಲಿಯೋ ಅವರ ಪ್ರೇಷಿತಾಧಿಕಾರದ ಉದ್ಘಾಟನಾ ಬಲಿಪೂಜೆಯಲ್ಲಿ ಭಾಗವಹಿಸುವ ಮೂಲಕ ಅಮೇರಿಕಾ ಉಪಾಧ್ಯಕ್ಷ ಹಾಗೂ ರಾಜ್ಯ ಕಾರ್ಯದರ್ಶಿ ಅವರು ಅಮೇರಿಕಾ ದೇಶವನ್ನು ಪ್ರತಿನಿಧಿಸಿದ್ದರು.
ಪೋಪ್ ಲಿಯೋ ಅವರನ್ನು ಭೇಟಿ ಮಾಡಿದ ನಂತರ ಜೆ ಡಿ ವ್ಯಾನ್ಸ್ ಅವರು ವ್ಯಾಟಿಕನ್ ವಿದೇಶಾಂಗ ಸಂಪರ್ಕಗಳ ಕಾರ್ಯದರ್ಶಿ ಆರ್ಚ್’ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.
ಸೌಹಾರ್ಧ ಮಾತುಕತೆಯ ವೇಳೆ ಜೆ ಡಿ ವ್ಯಾನ್ಸ್ ಹಾಗೂ ಆರ್ಚ್’ಬಿಷಪ್ ಗ್ಯಾಲಗರ್ ವ್ಯಾಟಿಕನ್ ಹಾಗೂ ಅಮೇರಿಕಾದ ನಡುವೆ ಉತ್ತಮ ದ್ವಿಪಕ್ಷೀಯ ಸಂಬಂಧವನ್ನು ಹೊಂದಿರುವುದನ್ನು ಪುನರುಚ್ಛರಿಸಿದರು.
ಧಾರ್ಮಿಕ ಜೀವನ ಹಾಗೂ ಧಾರ್ಮಿಕ ಸ್ವಾತಂತ್ರ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಮೇರಿಕಾ ಹಾಗೂ ಧರ್ಮಸಭೆ ಹೇಗೆ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬ ಕುರಿತು ಮಾತುಕತೆ ನಡೆಯಿತು.
ಅಂತಿಮವಾಗಿ, ಪ್ರಸಕ್ತ ಅಂತರಾಷ್ಟ್ರೀಯ ವಿದ್ಯಾಮಾನಗಳ ಕುರಿತು ಇಬ್ಬರೂ ತಮ್ಮ ವಿಷಯಗಳನ್ನು ಹಂಚಿಕೊಂಡರು ಹಾಗೂ ಯಾವುದೇ ಸಂಘರ್ಷಗಳು ಭುಗಿಲೇಳದಂತೆ ತಡೆದು, ಮಾನವೀಯ ಕಾರ್ಯಗಳು ಮುಂದುವರೆಯಬೇಕು ಎಂಬ ನಿಟ್ಟಿನಲ್ಲಿ ಮಾತುಕತೆಗಳಾದವು ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ತಿಳಿಸಿದೆ.