MAP

ಪೋಪ್ ಲಿಯೋ XIV: ಸಂವಾದಕ್ಕೆ ಮತ್ತು ಸೇತುವೆಗಳನ್ನು ನಿರ್ಮಿಸಲು ಇದೀಗ ಸಮಯವಾಗಿದೆ

ಪೋಪ್ ಲಿಯೋ ಅವರ ಪ್ರೇಷಿತಾಧಿಕಾರದ ಉದ್ಘಾಟನಾ ಬಲಿಪೂಜೆಯ ನಂತರ ಪೋಪ್ ಹದಿನಾಲ್ಕನೇ ಲಿಯೋ ಅವರು ಕಥೋಲಿಕೇತರ, ಧಾರ್ಮಿಕ ಸಮುದಾಯಗಳ ವಿವಿಧ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದು, ತಮ್ಮ ಪೂರ್ವಾಧಿಕಾರಿ ಪೋಪ್ ಫ್ರಾನ್ಸಿಸ್ ಅವರ ಸಂಪ್ರದಾಯವನ್ನು ಮುಂದುವರೆಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಲಿಯೋ ಅವರ ಪ್ರೇಷಿತಾಧಿಕಾರದ ಉದ್ಘಾಟನಾ ಬಲಿಪೂಜೆಯ ನಂತರ ಪೋಪ್ ಹದಿನಾಲ್ಕನೇ ಲಿಯೋ ಅವರು ಕಥೋಲಿಕೇತರ, ಧಾರ್ಮಿಕ ಸಮುದಾಯಗಳ ವಿವಿಧ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದು, ತಮ್ಮ ಪೂರ್ವಾಧಿಕಾರಿ ಪೋಪ್ ಫ್ರಾನ್ಸಿಸ್ ಅವರ ಸಂಪ್ರದಾಯವನ್ನು ಮುಂದುವರೆಸಿದ್ದಾರೆ.

ಸೋಮವಾರದ ವಿಶೇಷ ಸಾರ್ವಜನಿಕ ಭೇಟಿಯಲ್ಲಿ ಪೋಪ್ ಲಿಯೋ ಅವರು ಜಗತ್ತಿನ ವಿವಿಧ ಧರ್ಮಗಳ ಪ್ರತಿನಿಧಿಗಳನ್ನು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿ, ಅವರೊಂದಿಗೆ ಸಂವಾದವನ್ನು ಹಮ್ಮಿಕೊಂಡಿದ್ದಾರೆ. ತಮ್ಮ ಭಾಷಣದಲ್ಲಿ ಪೋಪ್ ಲಿಯೋ ಅವರು ಜಾಗತಿಕ ಸೋದರತೆಯ ಕುರಿತು ಮಾತನಾಡಿದ್ದಾರೆ. ಆ ಮೂಲಕ ಹಿಂದಿನ ಪೋಪ್'ಗಳ, ವಿಶೇಷವಾಗಿ ಪೋಪ್ ಇಪ್ಪತ್ಮೂರನೇ ಜಾನರ ಉಪಕ್ರಮಗಳನ್ನು ಮುಂದುವರೆಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಸೋದರತ್ವಕ್ಕಾಗಿ ನೀಡಿದ ಕೊಡುಗೆಯನ್ನು ಇದೇ ವೇಳೆ ಅವರು ಸ್ಮರಿಸಿದ್ದಾರೆ.

"ಪೋಪ್ ಫ್ರಾನ್ಸಿಸ್ ಅವರು ಕ್ರೈಸ್ತ ಪಂಗಡಗಳ ಐಕ್ಯತೆ ಹಾಗೂ ಸೋದರತ್ವ ಎರಡನ್ನೂ ಉತ್ತೇಜಿಸಿದರು" ಎಂದು ಹೇಳಿದ ಪೋಪ್ ಲಿಯೋ ಅವರು "ಧಾರ್ಮಿಕ ಬೆಸುಗೆಗಳಿಂದ ಯಾವುದನ್ನೂ ತೆಗೆಯದೆ ಅಂತರ್-ವೈಯಕ್ತಿಕ ಸಂಬಂಧಗಳನ್ನು ವೃದ್ಧಿಸಬೇಕು" ಎಂದು ಹೇಳಿದರು. 

ಇತರೆ ಕ್ರೈಸ್ತ ಧರ್ಮಸಭೆಗಳು ಹಾಗೂ ಧಾರ್ಮಿಕ ಸಮುದಾಯಗಳನ್ನುದ್ದೇಶಿಸಿ ಮಾತನಾಡಿದ ಪೋಪ್ ಲಿಯೋ ಅವರು "ನೈಸಿಯಾ ಕೌನ್ಸಿಲ್"ನ 1700ನೇ ವರ್ಷಾಚರಣೆಯ ಕುರಿತು ಪ್ರಸ್ತಾಪಿಸಿದರು. ವಿಶ್ವಾಸದಲ್ಲಿ ಐಕ್ಯತೆಯನ್ನು ಹೊಂದಿದ್ದರೆ ನಾವೆಲ್ಲರೂ ಕ್ರೈಸ್ತರಾಗಿ ಐಕ್ಯತೆಯಿಂದಿರುತ್ತೇವೆ ಎಂದು ಹೇಳಿದರು. ಕಥೋಲಿಕ ಧರ್ಮಸಭೆಯಲ್ಲಿ ಕ್ರೈಸ್ತ ಪಂಗಡಗಳ ಐಕ್ಯತೆ ಹಾಗೂ ಸಿನೋಡಲ್ ಹಾದಿಯನ್ನು ಆಳವಡಿಸಿಕೊಳ್ಳುವ ಮೂಲಕ ಪೋಪ್ ಫ್ರಾನ್ಸಿಸ್ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಬೇಕು ಎಂದು ಪೋಪ್ ಲಿಯೋ ಅವರು ಹೇಳಿದರು.

ಕಥೋಲಿಕೇತರ ಸಮುದಾಯಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಲಿಯೋ ಅವರು "ಎಲ್ಲರನ್ನೂ ಒಳಗೊಳ್ಳುವ ಮೂಲಕ ಮಾನವ ಸೋದರತ್ವದಲ್ಲಿ ಮುಂದುವರೆಯುವುದು ನಮ್ಮೆಲ್ಲರ ಹಾದಿಯಾಗಬೇಕು" ಎಂದು ಹೇಳಿದರು. ಇದೇ ವೇಳೆ "ಇದೀಗ ಸೇತುವೆಗಳನ್ನು ನಿರ್ಮಿಸಲು ಹಾಗೂ ಸಂವಾದಿಸಲು ಸಮಯವಾಗಿದೆ" ಎಂದು ಅವರು ಹೇಳಿದರು.

ಇದೇ ವೇಳೆ ಪೋಪ್ ಲಿಯೋ ಅವರು ಯೆಹೂದಿ, ಇಸ್ಲಾಂ ಹಾಗೂ ಇನ್ನಿತರ ಧರ್ಮಗಳೊಡನೆ ಕಥೋಲಿಕ ಧರ್ಮಸಭೆಯು ಹೊಂದಿರುವ ಸಂಬಂಧದ ಕುರಿತು ಮಾತನಾಡಿ, ಮಾನವೀಯತೆಯ ಜಗತ್ತನ್ನು ನಿರ್ಮಿಸಲು ನಾವೆಲ್ಲರೂ ಒಂದಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. 

ಅಂತಿಮವಾಗಿ, ಪೋಪ್ ಲಿಯೋ ಅವರು "ವಿವಿಧ ಸಮುದಾಯಗಳಾಗಿ ಆದರೆ ಮಾನವೀಯತೆಯ ಗುರಿಯನ್ನು ತಲುಪುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಕೈಗೊಳ್ಳುವ ಉಪಕ್ರಮಗಳು ಈ ಜಗತ್ತಿನಲ್ಲಿ ಶಾಂತಿಯನ್ನು ಮೂಡಿಸಲು ನೆರವಾಗುತ್ತವೆ. ಅನಂತ ಕರುಣಾಮಯಿಯಾದ ದೇವರು ನಮ್ಮ ಹೃದಯಗಳಲ್ಲಿ ಪ್ರೀತಿ ಹಾಗೂ ಸೋದರತ್ವದ ಸುಜ್ಞಾನವನ್ನು ಮೂಡಿಸಿ, ಸದಾ ವಿಶ್ವಶಾಂತಿಗಾಗಿ ನಾವು ಹಾತೊರೆಯುವಂತೆ ಮಾಡಲಿ" ಎಂದು ಪ್ರಾರ್ಥಿಸಿದರು.

19 ಮೇ 2025, 14:12