ಉದ್ಘಾಟನಾ ಬಲಿಪೂಜೆಯಲ್ಲಿ ಪೋಪ್ ಲಿಯೋ: ದೇವರೆಡೆಗೆ ನಾವೆಲ್ಲರೂ ಒಂದಾಗಿ ನಡೆದು, ಪರಸ್ಪರ ಪ್ರೀತಿಸೋಣ
ವರದಿ: ವ್ಯಾಟಿಕನ್ ನ್ಯೂಸ್
ಸಂತ ಪೇತ್ರರ ಚೌಕದಲ್ಲಿ ಇಂದು ಪೋಪ್ 14ನೇ ಲಿಯೋ ಅವರು ತಮ್ಮ ಪ್ರೇಷಿತಾಧಿಕಾರ ಆರಂಭದ ಬಲಿಪೂಜೆಯಲ್ಲಿ ಭಾಗವಹಿಸಿದ್ದಾರೆ. ತಮ್ಮ ಪ್ರಬೋಧನೆಯಲ್ಲಿ ಮಾತನಾಡಿದ ಅವರು ದೇವರೆಡೆಗೆ ನಾವೆಲ್ಲರೂ ಒಂದಾಗಿ ನಡೆದು ಪರಸ್ಪರ ಪ್ರೀತಿಸೋಣ ಎಂದು ಹೇಳಿದ್ದಾರೆ.
1 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು, ಜಗತ್ತಿನ ವಿವಿಧ ನಾಯಕರು ಹಾಗೂ ವಿವಿಧ ಕ್ರೈಸ್ತ ಪಂಗಡಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಇಂದು ವಿಶ್ವಗುರು 14ನೇ ಲಿಯೋ ಅವರು ತಮ್ಮ ಪ್ರೇಷಿತ ಅಧಿಕಾರದ ಉದ್ಘಾಟನಾ ಬಲಿಪೂಜೆಯನ್ನು ನೆರವೇರಿಸಿದ್ದಾರೆ.
ಯೆಹೂದಿ, ಮುಸ್ಲಿಂ, ಹಿಂದೂ, ಬೌದ್ಧ, ಸಿಖ್, ಪಾರ್ಸಿ ಹಾಗೂ ಜೈನ ಸಮುದಾಯಗಳ ವಿವಿಧ ಪ್ರತಿನಿಧಿಗಳು ಈ ಆಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಾರ್ಥನೆ ಹಾಗೂ ಸಂತೋಷದ ಬೆಂಬಲವನ್ನು ತಮಗೆ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ ವಿಶ್ವಗುರು ಲಿಯೋ ಅವರು ಕಳೆದ ಎರಡು ವಾರಗಳಲ್ಲಿ ಅವರು ಅನುಭವಿಸಿದ ತೀವ್ರ ಭಾವನೆಗಳ ಕುರಿತು ಹಂಚಿಕೊಂಡಿದ್ದಾರೆ.
ವಿಶ್ವಗುರು ಫ್ರಾನ್ಸಿಸ್ ಅವರ ನಿಧನದ ನಂತರ ನಾವು ಕುರಿ ಇಲ್ಲದ ಕುರಿಮಂದೆಯಾಗಿದ್ದೆವು ಎಂದು ಹೇಳಿದ ಅವರು, ಈಸ್ಟರ್ ಭಾನುವಾರದಂದು ಅವರ ಅಂತಿಮ ಆಶೀರ್ವಾದವನ್ನು ನಾವೆಲ್ಲರೂ ಪಡೆದೆವು. ಆ ಮೂಲಕ ವಿಶ್ವಾಸದ ಕಣ್ಣುಗಳಿಂದ, ಭರವಸೆ ಮತ್ತು ಸಂತೋಷದ ಕಣ್ಣುಗಳಿಂದ ಹೇಗೆ ಪ್ರಭು ತನ್ನ ಜನರನ್ನು ಕೈ ಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿಯಾದೆವು ಎಂದು ಹೇಳಿದರು.
ಕಾರ್ಡಿನಲ್'ಗಳ ಸಭೆಯ ಕುರಿತು ಮಾತನಾಡಿದ ವಿಶ್ವಗುರು ಲಿಯೋ ಅವರು ಪ್ರಾರ್ಥನಾಪೂರ್ವಕವಾಗಿ ಧರ್ಮಸಭೆ ಭವಿಷ್ಯದಲ್ಲಿ ಹೇಗೆ ಮುನ್ನಡೆಯಬೇಕು ಎಂಬುದನ್ನು ಚರ್ಚಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.
ಸಂಗೀತ ಉಪಕರಣಗಳಂತೆ ಈ ಚರ್ಚೆಯ ಸಂದರ್ಭದಲ್ಲಿ ಕಾರ್ಡಿನಲ್ಲುಗಳು ತಮ್ಮ ನಡುವೆ ಪವಿತ್ರಾತ್ಮರ ಪ್ರಭಾವವನ್ನು ಅನುಭವಿಸಿದರು ಎಂದು ವಿಶ್ವಗುರು ಲಿಯೋ ಅವರು ಹೇಳಿದರು.
ನನ್ನ ಯಾವುದೇ ಶ್ರೇಷ್ಠತೆ ಇಲ್ಲದೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಈಗ ನಾನು ಭಯದಿಂದ ನಿಮ್ಮ ಸಹೋದರನಂತೆ ನಿಮ್ಮ ಬಳಿಗೆ ಬಂದಿದ್ದೇನೆ. ನಾನು ನಿಮ್ಮ ವಿಶ್ವಾಸದ ಸೇವಕನಾಗಿರಲು ಬಯಸುತ್ತೇನೆ. ದೇವರ ಪ್ರೀತಿಯ ಹಾದಿಯಲ್ಲಿ ನಿಮ್ಮ ಜೊತೆ ನಡೆಯಲು ಬಯಸುತ್ತೇನೆ; ಏಕೆಂದರೆ ದೇವರಿಗೆ ನಾವೆಲ್ಲರೂ ಒಂದೇ ಕುಟುಂಬವಾಗಿ ಐಕ್ಯತೆಯಿಂದಿರಬೇಕು ಎಂಬ ಅಭಿಲಾಷೆ ಇದೆ ಎಂದು ವಿಶ್ವಗುರು ಲಿಯೋ ಅವರು ಹೇಳಿದರು.
ಯೇಸುಕ್ರಿಸ್ತರು ಪೇತ್ರರಿಗೆ ಧರ್ಮಸಭೆಯ ಉತ್ತರಾಧಿಕಾರವನ್ನು ನೀಡುವಾಗ ಅವರ ಸೇವಾಕಾರ್ಯದ ಅಂಶಗಳು ಪ್ರೀತಿ ಹಾಗೂ ಒಗ್ಗಟ್ಟಾಗಿದ್ದವು ಎಂದು ಅವರು ಹೇಳಿದರು. ಇಂದಿನ ಶುಭ ಸಂದೇಶದಲ್ಲಿ ಯೇಸುಕ್ರಿಸ್ತರು ತಮ್ಮ ಶಿಷ್ಯರಿಗೆ ತಮ್ಮ ಸೇವಾಕಾರ್ಯವನ್ನು ಮುಂದುವರಿಸುವಂತೆ ಹೇಳುತ್ತಾರೆ.
ಮುಂದುವರೆದು ಮಾತನಾಡಿದ ವಿಶ್ವಗುರು ಲಿಯೋ ಅವರು "ಧರ್ಮಸಭೆ ಎಂದಿಗೂ ಐಕ್ಯತೆಯಂದಿರಬೇಕು. ಸಹಭಾಗಿತ್ವ ಮತ್ತು ಒಗ್ಗಟ್ಟಿನ ಮೂಲಕ ಈ ಜಗತ್ತನ್ನು ಸಂಧಾನಗೊಳಿಸಬೇಕು ಎಂದು ಹೇಳಿದರು. ಈ ಜಗತ್ತು ಹಲವಾರು ಗಾಯಗಳಿಂದ ನೊಂದಿದೆ. ದ್ವೇಷ, ಹಿಂಸೆ, ಭಯ ಮತ್ತು ಆರ್ಥಿಕ ವಾಸ್ತವತೆ ಎಂಬುದು ಭೂಮಿಯ ಸಂಪನ್ಮೂಲಗಳನ್ನು ಶೋಷಿಸಿ ಬಡವರನ್ನು ಮೂಲೆಗೆ ತಳ್ಳುತ್ತಿದೆ. ಈ ಜಗತ್ತಿನಲ್ಲಿ ನಮಗೆ ಸಹಭಾಗಿತ್ವ, ಸಮನ್ವಯ, ಐಕ್ಯತೆ ಹಾಗೂ ಸೋದರತೆ ಬೇಕಿದೆ" ಎಂದು ಹೇಳಿದರು.
"ಕ್ರಿಸ್ತರನ್ನು ನೋಡಿ! ಕ್ರಿಸ್ತರ ಬಳಿಗೆ ಬನ್ನಿರಿ! ಎಂದು ಹೇಳುವ ಮೂಲಕ ದೀನತೆಯಿಂದ ಈ ಜಗತ್ತನ್ನು ನಾವು ಕ್ರಿಸ್ತನ ಬಳಿಗೆ ಕರೆದೊಯ್ಯಬೇಕಿದೆ. ಕ್ರಿಸ್ತರು ಒಂದಾಗಿರುವಂತೆ ನಾವು ಸಹ ಅವರಲ್ಲಿ ಒಂದಾಗಲು ಪ್ರಯತ್ನಿಸಬೇಕಿದೆ. ಎಲ್ಲಾ ಕ್ರೈಸ್ತ ಪಂಗಡಗಳನ್ನು ಐಕ್ಯತೆಯಿಂದ ಕರೆದೊಯ್ದು, ನಾವೆಲ್ಲರೂ ಕ್ರಿಸ್ತರ ಒಂದೇ ದೇಹವಾಗಿ ಮಾರ್ಪಡಬೇಕಿದೆ" ಎಂದು ಅವರು ಹೇಳಿದರು.
ಅಂತಿಮವಾಗಿ ಮಾತನಾಡಿದ ವಿಶ್ವಗುರು ಲಿಯೋ ಅವರು "ದೇವರ ಪ್ರೀತಿಯನ್ನು ಎಲ್ಲರಿಗೂ ಹಂಚಲು ನಾಮ ಕರೆ ಹೊಂದಿದ್ದೇವೆ; ಆದುದರಿಂದ ಎಲ್ಲಾ ಕ್ರೈಸ್ತರು ಪವಿತ್ರಾತ್ಮರಿಂದ ಪ್ರೇರಿತರಾಗಿ ದೇವರ ಪ್ರೀತಿ ಹಾಗೂ ಒಗ್ಗಟ್ಟಿನ ಮೂಲಕ ಶುಭ ಸಂದೇಶವನ್ನು ಸಾರಬೇಕಿದೆ ಹಾಗೂ ಈ ಜಗತ್ತಿಗೆ ಸಾಮರಸ್ಯ ಹಾಗೂ ಶಾಂತಿಯ ಪ್ರತೀಕವಾಗಬೇಕಿದೆ" ಎಂದು ಹೇಳಿದರು.