MAP

ಮೀನುಗಾರನ ಉಂಗುರ (ಫಿಶರ್'ಮ್ಯಾನ್ ರಿಂಗ್) ಎಂದರೇನು?

ಮೇ 18 ರಂದು ತಮ್ಮ ಪ್ರೇಷಿತಾಧಿಕಾರದ ಉದ್ಘಾಟನೆಯ ಬಲಿಪೂಜೆಯಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರು ಹೊಸ ಒಡಂಬಡಿಕೆಯಲ್ಲಿ ಬೇರೂರಿರುವ, ಸಂತ ಪೇತ್ರರ ಸೇವೆಯ ಗುರುತಾಗಿರುವ ಮೀನುಗಾರನ ಉಂಗುರ (ಫಿಶರ್'ಮ್ಯಾನ್ ರಿಂಗ್) ಅನ್ನು ಧರಿಸಿಕೊಳ್ಳಲಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪರ ಪೂಜಾವಿಧಿ ಆಚರಣೆಗಳ ವ್ಯಾಟಿಕನ್ ವಿಭಾಗವು ಮೀನುಗಾರರನ ಉಂಗುರದ ಹೊಸ ಚಿತ್ರವನ್ನು ಬಿಡುಗಡೆ ಮಾಡಿದ್ದು, ಪೋಪ್ ಹದಿನಾಲ್ಕನೇ ಲಿಯೋ ಅವರು ನಾಳೆ ತಮ್ಮ ಪ್ರೇಷಿತಾಧಿಕಾರದ ಉದ್ಘಾಟನಾ ಬಲಿಪೂಜೆಯಲ್ಲಿ ಇದನ್ನು ಧರಿಸಲಿದ್ದಾರೆ.

ಈ ಉಂಗುರದ ಮೇಲೆ ಸಂತ ಪೇತ್ರರ ಚಿತ್ರವಿದ್ದು, ಇದು ಹೊಸ ಒಡಂಬಡಿಕೆಯಲ್ಲಿ ಬೇರೂರಿದ್ದು, ಪ್ರಾಮುಖ್ಯತೆಯನ್ನು ಹೊಂದಿದೆ. ಮತ್ತಾಯನ ಶುಭ ಸಂದೇಶದಲ್ಲಿ (16:19) ಸಂತ ಪೇತ್ರರಿಗೆ ಕ್ರಿಸ್ತರು ಸ್ವರ್ಗ ಸಾಮ್ರಾಜ್ಯದ ಬೀಗದ ಕೈಗಳನ್ನು ಕೊಟ್ಟರು. ಸಂತ ಲೂಕನ ಶುಭ ಸಂದೇಶದಲ್ಲಿ (22:32) ಕ್ರಿಸ್ತರು ತನ್ನ ಸಹೋದರರನ್ನು ವಿಶ್ವಾಸ ಹಾಗೂ ಸೇವಾಕಾರ್ಯದಲ್ಲಿ ಬಲಪಡಿಸುವಂತೆ ಪೇತ್ರನಿಗೆ ಹೇಳುತ್ತಾರೆ.

ಹೀಗೆ, ಮೀನುಗಾರನ ಉಂಗುರವು ವಿಶ್ವಾಸವನ್ನು ದೃಢೀಕರಿಸಿ, ಮೊದಲ ಪೋಪ್ ಸಂತ ಪೇತ್ರರಿಗೆ ಕ್ರಿಸ್ತರು ವಹಿಸಿದ ಸೇವಾ ಕಾರ್ಯದ ಜವಾಬ್ದಾರಿಯನ್ನು ಸೂಚಿಸುತ್ತದೆ.

ಸಂತ ಪೇತ್ರ ಮೂಲತಃ ಮೀನುಗಾರನಾಗಿದ್ದು, ಆತನನ್ನು ಮೀನುಗಾರ ಪ್ರೇಷಿತ ಎಂದೇ ಕರೆಯಲಾಗುತ್ತದೆ. ಈ ನಿಟ್ಟಿನಲ್ಲಿ ಪೋಪರು ಧರಿಸುವ ಉಂಗುರಕ್ಕೆ ಈ ಹೆಸರು ಬಂದಿದೆ. ಇದು ಮೊದಲ ಪೋಪರಿಂದ ಈವರೆಗೂ ಸಹ ಪ್ರೇಷಿತ ಉತ್ತರಾಧಿಕಾರದ ಸಂಕೇತವಾಗಿದೆ.

ಸುಮಾರು ಹದಿಮೂರನೇ ಶತಮಾನದಿಂದ ಈ ಉಂಗುರವು ಕಥೋಲಿಕ ಧರ್ಮಸಭೆಯ ಆಚರಣೆಗಳಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದು, ಇದನ್ನು ದಾಖಲೆಗಳಿಗೆ ಸಹಿ ಹಾಕುವ ವೇಳೆ ಮುದ್ರೆಯನ್ನಾಗಿ ಉಪಯೋಗಿಸಲಾಗುತ್ತಿತ್ತು. 1842 ರವರೆಗೂ ಅಂದರೆ ಇದರ ಮೂಲಕವೇ ದಾಖಲೆ ಮತ್ತು ದಸ್ತಾವೇಜುಗಳಿಗೆ ಮುದ್ರೆಯನ್ನು ಒತ್ತಲಾಗುತ್ತಿತ್ತು. ಈಗಲೂ ಸಹ ಇದನ್ನು ಸಾಂಕೇತಿಕವಾಗಿ ಧರಿಸಿಕೊಳ್ಳಲಾಗುತ್ತದೆ.

ಒಮ್ಮೆ ಪೋಪರು ಮರಣ ಹೊಂದಿದರೆ ಅವರ ಉಂಗುರವನ್ನು ಹಾಗೂ ಅಧಿಕೃತ ಮುದ್ರೆಯನ್ನು ಉಳಿಯ ಮೂಲಕ ಮುರಿದು ಹಾಕಲಾಗುತ್ತದೆ. ಇದಕ್ಕೆ ಕಾರಣ ಅದನ್ನು ಯಾರೂ ಮರು-ಉಪಯೋಗಿಸುವಂತಿಲ್ಲ ಅಥವಾ ಅದನ್ನು ಬಳಸಿ ದುರುಪಯೋಗಪಡಿಸಿಕೊಳ್ಳಬಾರದು ಎಂಬ ಉದ್ದೇಶದಿಂದ. 

2013 ರಲ್ಲಿ ಪೋಪ್ ಫ್ರಾನ್ಸಿಸ್ ಅವರಿಗೆ ಚಿನ್ನ-ಲೇಪಿತ ಬೆಳ್ಳಿ ಉಂಗುರವನ್ನು ನೀಡಲಾಗಿತ್ತು. ಅದು ಸಂತ ಆರನೇ ಪೌಲರ ಕಾರ್ಯದರ್ಶಿವರದ್ದಾಗಿತ್ತು. ಪೋಪ್ ಹದಿನಾರನೇ ಬೆನೆಡಿಕ್ಟರು ಚಿನ್ನದ ಉಂಗುರವನ್ನು ಧರಿಸುತ್ತಿದ್ದು, ಅದರ ಮೇಲೆ ದೋಣಿಯಿಂದ ಮೀನು ಹಿಡಿಯುವ ಸಂತ ಪೇತ್ರರ ಚಿತ್ರವನ್ನು ಕೆತ್ತಲಾಗಿತ್ತು.

ಪೋಪ್ ಹದಿನಾಲ್ಕನೇ ಲಿಯೋ ಅವರು ಸಹ ಸಂಪ್ರದಾಯವನ್ನು ಮುಂದುವರೆಸಿದ್ದು, ಅವರ ಉಂಗುರದ ಮೇಲೆ ಸಂತ ಪೇತ್ರರ ಬೀಗದ ಕೈಗಳನ್ನು ಹಿಡಿದಿರುವ  ಹಾಗೂ ಮೀನಿನ ಬಲೆಯ ಚಿತ್ರವಿದೆ. ಅಂದರೆ - ಈ ಮೂಲಕ ಪೋಪ್ ಲಿಯೋ ಅವರು ಸಂತ ಪೇತ್ರರ 266ನೇ ಉತ್ತರಾಧಿಕಾರಿಯಾಗಿ ಪ್ರೇಷಿತ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.

17 ಮೇ 2025, 17:36