MAP

MAP Leo XIV attends audience with Eastern Churches

ಪೂರ್ವಧರ್ಮಸಭೆಗಳಿಗೆ ಪೋಪ್ ಲಿಯೋ: ಧರ್ಮಸಭೆಗೆ ನಿಮ್ಮ ಅವಶ್ಯಕತೆ ಇದೆ

ಪೂರ್ವಧರ್ಮಸಭೆಗಳ ಜ್ಯೂಬಿಲಿಯ ಹಿನ್ನೆಲೆ ಪೋಪ್ ಹದಿನಾಲ್ಕನೇ ಲಿಯೋ ಅವರು ಪೂರ್ವಧರ್ಮಸಭೆಗಳ ಎಲ್ಲಾ ಕಾರ್ಡಿನಲರು ಹಾಗೂ ಧರ್ಮಾಧ್ಯಕ್ಷರು ಹಾಗೂ ಭಕ್ತಾಧಿಗಳನ್ನು ಸ್ವಾಗತಿಸಿದ್ದಾರೆ. ತಮ್ಮ ಸಂಪ್ರದಾಯಗಳನ್ನು ರಕ್ಷಿಸಿ, ಶಾಂತಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದ್ದಾರೆ ಎಂದು ಅವರು ಹೇಳಿದರು. ನಿಜವಾದ ಶಾಂತಿಗೆ ಸಂಧಾನ, ಕ್ಷಮೆ ಹಾಗೂ ಎಲ್ಲವನ್ನೂ ಮರೆತು ಹೊಸ ಅಧ್ಯಾಯವನ್ನು ಸ್ಥಾಪಿಸುವ ಗುಣವಿರಬೇಕು ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

"ಕ್ರಿಸ್ತರು ಪುನರುತ್ಥಾನ ಹೊಂದಿದ್ದಾರೆ. ನಿಜವಾಗಿಯೂ ಪುನರುತ್ಥಾನ ಹೊಂದಿದ್ದಾರೆ" ಎಂಬ ಪಾಸ್ಖ ಕಾಲದ ಶುಭಾಶಯದ ಮೂಲಕ ಪೋಪ್ ಹದಿನಾಲ್ಕನೇ ಲಿಯೋ ಅವರು ಪೂರ್ವಧರ್ಮಸಭೆಗಳ ಜ್ಯೂಬಿಲಿಗೆ ಎಲ್ಲರನ್ನೂ ಬರಮಾಡಿಕೊಂಡರು.

ರೋಮಿನೊಂದಿಗೆ ಸಂಪೂರ್ಣ ಸಹಭಾಗಿತ್ವದಲ್ಲಿರುವ ಎಲ್ಲಾ 23 ಪೂರ್ವಧರ್ಮಸಭೆಗಳನ್ನು ಪೋಪ್ ಹದಿನಾಲ್ಕನೇ ಲಿಯೋ ಅವರು ಉದ್ದೇಶಿಸಿ ಮಾತನಾಡಿದರು. "ದೇವರ ದೃಷ್ಟಿಯಲ್ಲಿ ನೀವೆಲ್ಲರೂ ಅಮೂಲ್ಯವಾಗಿದ್ದೀರಿ. ನಾನು ಪ್ರೇಷಿತಾಧಿಕಾರವನ್ನು ಆರಂಭಿಸುವ ಹೊತ್ತಿನಲ್ಲಿ ಮೊದಲನೇಯದಾಗಿ ನಿಮ್ಮನ್ನು ಭೇಟಿ ಮಾಡಿದ್ದು ಬಹಳ ಖುಷಿಯಾಗಿದೆ ಹಾಗೂ ವಿಶೇಷವಾಗಿದೆ" ಎಂದು ಹೇಳಿದರು. 

"ನಿಮ್ಮನ್ನು ನೋಡುತ್ತಲೇ ನಾನು ನಿಮ್ಮ ಪರಂಪರೆಯ ವೈವಿಧ್ಯತೆ ಹಾಗೂ ರಕ್ತಸಾಕ್ಷಿಗಳ ಗುಣದ ಕುರಿತು ಅವಲೋಕಿಸುತ್ತೇನೆ ಹಾಗೂ ಆಶ್ಚರ್ಯಪಡುತ್ತೇನೆ." ಎಂದು ಹೇಳಿದರು. ಇದೇ ವೇಳೆ ಅವರು ಹಿಂದಿನ ವಿಶ್ವಗುರುಗಳಾದ ಹದಿಮೂರನೇ ಲಿಯೋ, ದ್ವಿತೀಯ ಜಾನ್ ಪೌಲರು ಹಾಗೂ ಪೋಪ್ ಫ್ರಾನ್ಸಿಸ್ ಅವರ ಮಾತುಗಳನ್ನು ನೆನಪಿಸಿಕೊಂಡು "ಹಿಂದಿನ ವಿಶ್ವಗುರುಗಳು ಪೂರ್ವಧರ್ಮಸಭೆಗಳ ಸಂಪ್ರದಾಯವನ್ನು ವಿಶೇಷವಾಗಿ ದೈವಾರಾಧನಾ ವಿಧಿಯಲ್ಲಿ ಉಳಿಸಿಕೊಳ್ಳಬೇಕು ಎಂದು ಹೇಳಿದ್ದರು" ಅದನ್ನೇ ನಾವೀಗ ಮಾಡಬೇಕಿದೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು "ಧರ್ಮಸಭೆಗೆ ನಿಮ್ಮ ಅವಶ್ಯಕತೆ ಇದೆ" ಎಂದು ಹೇಳುವ ಮೂಲಕ ಅಖಿಲ ಧರ್ಮಸಭೆಯಲ್ಲಿ ಪೂರ್ವಧರ್ಮಸಭೆಗಳ ಪಾತ್ರ ಪ್ರಾಮುಖ್ಯತೆಯ ಕುರಿತು ಮಾತನಾಡಿದರು. ಆದುದರಿಂದ, ನಿಮ್ಮ ಸಂಪ್ರದಾಯಗಳನ್ನು ನೀವು ಕಾಪಾಡಿಕೊಳ್ಳುವುದು ಬಹುಮುಖ್ಯವಾಗುತ್ತದೆ" ಎಂದು ಅವರು ಹೇಳಿದರು. 

ಇದೇ ಸಂದರ್ಭದಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರು ನೆರೆದಿದ್ದವರಿಗೆ "ಶಾಂತಿಗಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ಕರೆ ನೀಡಿದರು. ಶತೃಗಳನ್ನು ಒಂದಾಗಿ ಕರೆತಂದು ಅವರ ನಡುವೆ ಮಾತುಕತೆಗಳನ್ನು ರೂಪಿಸುವಂತೆ ಹಾಗೂ ಆ ಮೂಲಕ ಸಂಧಾನಕ್ಕೆ ಸಾಕ್ಷಿಗಳಾಗಬೇಕು" ಎಂದು ಅವರು ಕರೆ ನೀಡಿದರು. ಪೋಪ್ ಹದಿನಾಲ್ಕನೇ ಲಿಯೋ ಅವರು ಅಂತಿಮವಾಗಿ ಎಲ್ಲರ ಮೇಲೆ ದೇವರ ಆಶೀರ್ವಾದಗಳನ್ನು ಕೋರಿದರು.

14 ಮೇ 2025, 16:30