ಪೋಪ್ ಲಿಯೋ XIV: 'ಶಾಂತಿ ನಿಮ್ಮೊಡನೆ ಇರಲಿ'
ಪೋಪ್ ಲಿಯೋ XIV ಅವರು ಸಂತ ಪೇತ್ರರ ಬೆಸಿಲಿಕಾದಿಂದ ಸಂತ ಪೇತ್ರರ ಉತ್ತರಾಧಿಕಾರಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡಾಗ ರೋಮ್ ನಗರ ಮತ್ತು ಜಗತ್ತನ್ನು ಈ ಮಾತುಗಳೊಂದಿಗೆ ಸ್ವಾಗತಿಸಿದರು:
ಪೋಪ್ ಲಿಯೋ XIV: ರೋಮ್ ಮತ್ತು ಜಗತ್ತಿಗೆ ಶುಭಾಶಯಗಳು.
ಶಾಂತಿ ನಿಮ್ಮೊಂದಿಗೆ ಇರಲಿ! ಪ್ರಿಯ ಸಹೋದರ ಸಹೋದರಿಯರೇ, ಉತ್ತಮ ಕುರುಬರಾದ ಪ್ರಭು ಕ್ರಿಸ್ತರು ತನ್ನ ಕುರಿ ಮಂದೆಗಾಗಿ ಪ್ರಾಣವನ್ನು ನೀಡಿ ಪುನರುತ್ಥಾನಗೊಂಡ ಕ್ರಿಸ್ತರ ಮೊದಲ ಶುಭಾಶಯ ಇದು. ಈ ಶಾಂತಿಯ ಶುಭಾಶಯವು ನಿಮ್ಮ ಹೃದಯಗಳನ್ನು ಪ್ರವೇಶಿಸಲು, ನಿಮ್ಮ ಕುಟುಂಬಗಳನ್ನು, ಎಲ್ಲಾ ಜನರನ್ನು, ಅವರು ಎಲ್ಲಿದ್ದರೂ ತಲುಪಲು ನಾನು ಬಯಸುತ್ತೇನೆ: ಶಾಂತಿ ಸದಾ ನಿಮ್ಮೊಂದಿಗೆ ಇರಲಿ.
ಪುನರುತ್ಥಾನಗೊಂಡ ಕ್ರಿಸ್ತರ ಶಾಂತಿ, ನಿಶ್ಯಸ್ತ್ರಗೊಳಿಸುವ ಮತ್ತು ವಿನಮ್ರ ರಾಗಿಸುವ ಮತ್ತು ಸಂರಕ್ಷಿಸುವ ಶಾಂತಿಯಾಗಿದೆ. ಇದು ದೇವರಿಂದಲೇ ಬರುತ್ತದೆ. ಯಾವುದೇ ಮಿತಿ ಅಥವಾ ಷರತ್ತುಗಳಿಲ್ಲದೆ ನಮ್ಮೆಲ್ಲರನ್ನೂ ದೇವರು ಪ್ರೀತಿಸುತ್ತಾರೆ. ಪೋಪ್ ಫ್ರಾನ್ಸಿಸ್ ರವರು ಅನಾರೋಗ್ಯದಿಂದಿದ್ದರೂ ಪುನರುತ್ಥಾನದ ಹಬ್ಬದಂದು ರೋಮ್ ಮತ್ತು ಜಗತ್ತನ್ನು ಆಶೀರ್ವದಿಸಿದ ಹಾಗು ಯಾವಾಗಲೂ ಧೈರ್ಯತುಂಬುವಂತಹ ಅವರ ಮಾತುಗಳನ್ನ ನೆನಪಿನಲ್ಲಿಡೋಣ.
ಅದೇ ಆಶೀರ್ವಾದವನ್ನು ಮುಂದುವರಿಸಲು ನನ್ನನ್ನು ಅನುಮತಿಸಿ. ದೇವರು ನಮ್ಮೆಲ್ಲರನ್ನೂ ಪ್ರೀತಿಸುತ್ತಾರೆ, ದುಷ್ಟತನವು ನಮ್ಮ ಮೇಲುಗೈ ಸಾಧಿಸುವುದಿಲ್ಲ. ನಾವೆಲ್ಲರೂ ದೇವರ ಕೈಯಲ್ಲಿದ್ದೇವೆ. ಭಯವಿಲ್ಲದೆ, ಒಗ್ಗಟ್ಟಿನಿಂದ, ದೇವರೊಂದಿಗೆ ಮತ್ತು ನಾವೆಲ್ಲರೂ ಕೈಜೋಡಿಸಿ, ಐಕ್ಯತೆಯಿಂದ ಮುಂದೆ ಸಾಗೋಣ. ನಾವು ಕ್ರಿಸ್ತರ ಅನುಯಾಯಿಗಳು, ಪ್ರಭು ಕ್ರಿಸ್ತರು ನಮ್ಮನ್ನು ಮುನ್ನಡೆಸುತ್ತಾರೆ ಮತ್ತು ಜಗತ್ತಿಗೆ ಅವರ ಬೆಳಕು ಬೇಕಾಗಿದೆ. ದೇವರ ಪ್ರೀತಿಯನ್ನು ತಲುಪಲು ಮನುಷ್ಯರಿಗೆ ಪ್ರಭು ಕ್ರಿಸ್ತರು ಸೇತುವೆಯಾಗಿದ್ದಾರೆ. ಸಂವಾದ ಮತ್ತು ಸಹಬಾಳ್ವೆಯ ಸೇತುವೆಗಳನ್ನು ನಿರ್ಮಿಸಲು ನೀವು ನಮಗೆ ಸಹಾಯ ನೀಡಿರಿ ಇದರಿಂದ ನಾವೆಲ್ಲರೂ ಯಾವಾಗಲೂ ಶಾಂತಿಯ ಒಂದೇ ಕುಟುಂಬವಾಗಿರಬಹುದು.
ಪೋಪ್ ಫ್ರಾನ್ಸಿಸ್ ಅವರಿಗೆ ಧನ್ಯವಾದಗಳು!
ಪೇತ್ರನ ಉತ್ತರಾಧಿಕಾರಿಯಾಗಲು ಆಯ್ಕೆ ಮಾಡಿದ ನನ್ನ ಕಾರ್ಡಿನಲ್ ಸಹೋದರರಿಗೆ ಧನ್ಯವಾದಗಳು. ಶಾಂತಿ ಮತ್ತು ನ್ಯಾಯಕ್ಕಾಗಿ ಎಲ್ಲರೂ ಒಟ್ಟಾಗಿ ಹುಡುಕುವ, ಮಹಿಳೆಯರು ಮತ್ತು ಪುರುಷರಾಗಿ ಒಟ್ಟಾಗಿ ಕೆಲಸ ಮಾಡುವ. ಭಯವಿಲ್ಲದೆ ಯೇಸುಕ್ರಿಸ್ತರಿಗೆ ವಿಶ್ವಾಸಿಗಳಾಗಿರುವ, ಪ್ರಭು ಕ್ರಿಸ್ತರನ್ನು ಪ್ರಚುರಪಡಿಸುವ, ಸುವಾರ್ತ ಪ್ರಸಾರಕರಾಗಿ, ಶುಭಸಂದೇಶಕ್ಕೆ ವಿಶ್ವಾಸಿಗಳಾಗಿ ಧರ್ಮಸಭೆಯನ್ನು ಕಟ್ಟೋಣ.
ನಾನು ಆಗಸ್ಟೀನಿಯನ್. ಸಂತ ಆಗಸ್ಟೀನ್ ರವರ ಮಗ. ಅವರು ಹೀಗೆನ್ನುತ್ತಾರೆ, "ನಿಮ್ಮೊಂದಿಗೆ ನಾನು ಕ್ರೈಸ್ತ, ನಿಮಗಾಗಿ ಧರ್ಮಾಧ್ಯಕ್ಷ." ಆದ್ದರಿಂದ ದೇವರು ನಮಗಾಗಿ ಸಿದ್ಧಪಡಿಸಿರುವ ಆ ವಾಗ್ದತಾ ನಾಡಿನ ಕಡೆಗೆ ನಾವೆಲ್ಲರೂ ಒಟ್ಟಿಗೆ ನಡೆಯೋಣ.
ರೋಮ್ ಧರ್ಮಕ್ಷೇತ್ರಕ್ಕೆ, ವಿಶೇಷ ಶುಭಾಶಯ:
ನಾವು ಒಟ್ಟಿಗೆ ಸುವಾರ್ಥಪ್ರಸಾರದ ಧರಮಸಭೆ ಆಗಿರುವುದು ಹೇಗೆ ಎಂದು ನೋಡಬೇಕು. ಈ ಸಂತ ಪೇತ್ರರ ಚೌಕವು ಎಲ್ಲರನ್ನು ಅಪ್ಪಿಕೊಳ್ಳುತದೋ ಅದೇ ರೀತಿ ನಾವು ಸಹ ತೆರೆದ ಕರಗಳೊಂದಿಗೆ ಎಲ್ಲರನ್ನು ಪ್ರೀತಿಯಿಂದ ಸ್ವೀಕರಿಸಿ, ಸೇತುವೆಗಳನ್ನು ನಿರ್ಮಿಸಿ ಮುನ್ನಡೆಯೋಣ.
ಇಂದು ಪೊಂಪೈ ಮಾತೆಯ ದಿನವಾಗಿದೆ
ನಮ್ಮ ತಾಯಿ ಮರಿಯ ಯಾವಾಗಲೂ ನಮ್ಮೊಂದಿಗೆ ನಡೆಯಲು ಬಯಸುತ್ತಾರೆ, ನಮಗೆ ಹತ್ತಿರವಾಗಿರುತ್ತಾರೆ, ತಮ್ಮ ಮಧ್ಯಸ್ಥಿಕೆ ಮತ್ತು ಪ್ರೀತಿಯಿಂದ ನಮಗೆ ಯಾವಾಗಲೂ ಸಹಾಯ ಮಾಡಲು ಬಯಸುತ್ತಾರೆ. ಆದ್ದರಿಂದ ಈ ಸುವಾರ್ತ ಪ್ರಸಾರಕ್ಕಾಗಿ, ನಮ್ಮೆಲ್ಲರಿಗಾಗಿ, ನಮ್ಮ ಧರ್ಮಸಭೆಗಾಗಿ ಮತ್ತು ಜಗತ್ತಿನಲ್ಲಿ ಶಾಂತಿಗಾಗಿ ನಾವು ಒಟ್ಟಾಗಿ ಪ್ರಾರ್ಥಿಸೋಣ.
ನಮ್ಮ ತಾಯಿ ಮರಿಯಮ್ಮನವರ ಮೂಲಕ ಈ ವಿಶೇಷ ಅನುಗ್ರಹವನ್ನು ನಾವು ಬೇಡುತ್ತೇವೆ.ನಮೋ ಮಾರಿಯಾ ಪ್ರಸಾದ ಪೂರ್ಣೆಯೇ . . . [ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಮತ್ತು ಪ್ರಪಂಚದಾದ್ಯಂತ ಜನಸಮೂಹದೊಂದಿಗೆ ನವ ಜಗದ್ಗುರುಗಳು ನಮೋ ಮರಿಯಾ ಪ್ರಾರ್ಥನೆಯನ್ನು ಮುಂದುವರಿಸಿದರು.]