ಕೊಲಂಬಿಯಾ ಅಧ್ಯಕ್ಷ ಗುಸ್ಟವೊ ಪೆತ್ರೊ ಅವರನ್ನು ಭೇಟಿ ಮಾಡಿದ ಪೋಪ್ ಲಿಯೋ XIV
ವರದಿ: ವ್ಯಾಟಿಕನ್ ನ್ಯೂಸ್
ಕೊಲಂಬಿಯಾದ ಅಧ್ಯಕ್ಷ ಗುಸ್ಟವೊ ಪೆತ್ರೊ ಅವರು ಪೋಪ್ ಹದಿನಾಲ್ಕನೇ ಲಿಯೋ ಅವರ ಪ್ರೇಷಿತಾಧಿಕಾರದ ಉದ್ಘಾಟನಾ ಬಲಿಪೂಜೆಯಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಇಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಕೊಲಂಬಿಯಾದ ಅಧ್ಯಕ್ಷರನ್ನು ಖಾಸಗಿಯಾಗಿ ಭೇಟಿ ಮಾಡಿದ್ದಾರೆ.
ವ್ಯಾಟಿಕನ್ ಮಾಧ್ಯಮ ಕಚೇರಿಯು ಕೊಲಂಬಿಯಾದ ಅಧ್ಯಕ್ಷರು ಪೋಪ್ ಹದಿನಾಲ್ಕನೇ ಲಿಯೋ ಅವರನ್ನು ಇಂದು ಭೇಟಿ ಮಾಡಿದ್ದಾರೆ ಎಂದು ವರದಿ ಮಾಡಿದೆ.
ಪೋಪರನ್ನು ಭೇಟಿ ಮಾಡಿದ ನಂತರ ಕೊಲಂಬಿಯಾದ ಅಧ್ಯಕ್ಷರು ವ್ಯಾಟಿಕನ್ನಿನ ವಿದೇಶಾಂಗ ಸಂಪರ್ಕಗಳ ಕಾರ್ಯದರ್ಶಿಯಾಗಿರುವ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್ ಅವರನ್ನು ಭೇಟಿ ಮಾಡಿದರು.
ಸೌಹಾರ್ದ ಮಾತುಕತೆಯಲ್ಲಿ ವ್ಯಾಟಿಕನ್ನಿನ ವಿದೇಶಾಂಗ ಸಂಪರ್ಕಗಳ ಕಾರ್ಯದರ್ಶಿಯಾಗಿರುವ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್ ಮತ್ತು ಕೊಲಂಬಿಯಾದ ಅಧ್ಯಕ್ಷರು ಶಾಂತಿ ಹಾಗೂ ಸಂಧಾನ ಪ್ರಕ್ರಿಯೆಯಲ್ಲಿ ಧರ್ಮಸಭೆ ಹಾಗೂ ಕೊಲಂಬಿಯ ಸರ್ಕಾರದ ಪಾತ್ರದ ಕುರಿತು ಚರ್ಚಿಸಿದರು.
ಕೊಲಂಬಿಯಾದಲ್ಲಿನ ಸಮಾಜೋ-ರಾಜಕೀಯ ಪರಿಸ್ಥಿತಿಗಳ ಕುರಿತೂ ಸಹ ಇಲ್ಲಿ ಚರ್ಚಿಸಲಾಯಿತು; ವಿಶೇಷವಾಗಿ ವಲಸೆ ಹಾಗೂ ಹವಾಮಾನ ಬದಲಾವಣೆ ಕುರಿತ ವಿಷಯಗಳು ಚರ್ಚೆಯಲ್ಲಿ ಮುನ್ನಲೆಗೆ ಬಂದವು ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯ ಪ್ರಕಟಣೆಯು ಹೇಳಿದೆ.