ಅಭ್ಯಂಗಿತ ಜೀವನ ಆಯೋಗಕ್ಕೆ ಸಿಸ್ಟರ್ ತಿಝಿಯಾನ ಅವರನ್ನು ಕಾರ್ಯದರ್ಶಿಯಾಗಿ ನೇಮಿಸಿದ ಪೋಪ್ ಲಿಯೋ
ವರದಿ: ವ್ಯಾಟಿಕನ್ ನ್ಯೂಸ್
ಧಾರ್ಮಿಕ ಸಭೆಗಳ ಉಸ್ತುವಾರಿಯಾಗಿರುವ ಆಭ್ಯಂಗಿತ ಜೀವನ ಆಯೋಗಕ್ಕೆ ಸಿಸ್ಟರ್ ತಿಝಿಯಾನ ಅವರನ್ನು ಪೋಪ್ ಲಿಯೋ ಅವರು ಕಾರ್ಯದರ್ಶಿಯನ್ನಾಗಿ ನೇಮಿಸಿದ್ದಾರೆ. ಸಿಸ್ಟರ್ ತಿಝಿಯಾನ ಮೆರ್ಲೆಟ್ಟಿ ಅವರು ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಪೂವರ್ ಧಾರ್ಮಿಕ ಸಭೆಯ ಸುಪೀರಿಯರ್ ಜನರಲ್ ಆಗಿದ್ದಾರೆ.
ಇವರು ಸಿಸ್ಟರ್ ಸಿಮೋನಾ ಬ್ರಂಬಿಲ್ಲಾ ಅವರ ಆಡಳಿತದಡಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇದೇ ವರ್ಷ ಜನವರಿಯಲ್ಲಿ ಪ್ರಪ್ರಥಮ ಬಾರಿಗೆ ಸಿಸ್ಟರ್ ಸಿಮೋನಾ ಬ್ರಂಬಿಲ್ಲಾ ವ್ಯಾಟಿಕನ್ ಆಯೋಗವೊಂದರ ನೇತೃತ್ವವನ್ನು ವಹಿಸಿಕೊಂಡ ಮೊಟ್ಟ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾದರು.
2023-2025 ರವರೆಗೆ ಸಿಸ್ಟರ್ ಸಿಮೋನಾ ಬ್ರಂಬಿಲ್ಲಾ ಅವರು ಕಾರ್ಯದರ್ಶಿಯಾಗಿ ಅಂದರೆ ಇದೀಗ ಸಿಸ್ಟರ್ ತಿಝಿಯಾನ ಅವರು ವಹಿಸಿಕೊಳ್ಳಲಿರುವ ಹುದ್ದೆಯನ್ನು ನಿಭಾಯಿಸಿದ್ದರು.
ಕಾರ್ಡಿನಲ್ ಎಂಜೆಲ್ ಫೆರ್ನಾಂಡೀಸ್ ಅರ್ತಿಮೆ ಅವರು ಈ ಆಯೋಗದ ಪ್ರೋ-ಫ್ರೀಫೆಕ್ಟ್ ಆಗಿದ್ದಾರೆ.
ಸಿಸ್ಟರ್ ತಿಝಿಯಾನ ಮೆರ್ಲೆಟ್ಟಿ ಅವರು ಸೆಪ್ಟೆಂಬರ್ 30, 1959 ರಂದು ಇಟಲಿಯ ಪಿನೆಟೋ ಎಂಬಲ್ಲಿ ಜನಿಸಿದರು. ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಪೂವರ್ ಸಭೆಯಲ್ಲಿ ಅವರು 1986 ರಲ್ಲಿ ತಮ್ಮ ಮೊದಲ ವಾಗ್ದಾನವನ್ನು ನೆರವೇರಿಸಿದರು. 1984 ರಲ್ಲಿ ಅವರು ಕಾನೂನು ಪದವಿಯನ್ನು ಪಡೆದರು. 1994 ರಲ್ಲಿ ಪೊಂಟಿಫಿಕಲ್ ಲ್ಯಾಟರನ್ ವಿಶ್ವವಿದ್ಯಾನಿಲಯದಿಂದ ಅವರು ಕ್ಯಾನನ್ ಲಾ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು.
2004 ರಿಂದ 2013 ರವರೆಗೂ ಇವರು ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಪೂವರ್ ಸಭೆಯ ಸುಪೀರಿಯರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. 2014 ರಿಂದ ಇವರೆಗೂ ಅವರು ರೋಮ್ ನಗರದಲ್ಲಿರುವ ಪೊಂಟಿಫಿಕಲ್ ಅಂತೋನಿಯಾನುಂ ವಿಶ್ವವಿದ್ಯಾನಿಲಯದಲ್ಲಿ ಕ್ಯಾನನ್ ಲಾ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.