ಪೋಪ್ ಫ್ರಾನ್ಸಿಸ್ ಅವರ "ನೈತಿಕ ಅಧಿಕಾರಕ್ಕೆ" ಗೌರವ ಸಲ್ಲಿಸಿದ ಯುರೋಪಿಯನ್ ಯೂನಿಯನ್ ಸಂಸತ್ತು
ವರದಿ: ವ್ಯಾಟಿಕನ್ ನ್ಯೂಸ್
ಯುರೋಪಿಯನ್ ಸಂಸತ್ತು ಸ್ಟ್ರಾಸ್ಬರ್ಗ್ ನಲ್ಲಿ ತನ್ನ ಸಾರ್ವತ್ರಿಕ ಸಭೆಯನ್ನು ಆರಂಭಿಸಿದೆ. ಈ ಸಂದರ್ಭದಲ್ಲಿ ಅದು ಕಳೆದು ತಿಂಗಳು ಅಗಲಿದ ಪೋಪ್ ಫ್ರಾನ್ಸಿಸ್ ಅವರಿಗೆ ಗೌರವವನ್ನು ಸಲ್ಲಿಸಿದೆ.
ಕಾರ್ಡಿನಲ್ಲುಗಳ ಪರಿಷತ್ತು ನಾಳೆ ನೂತನ ಪೋಪನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಿಸುತ್ತಿರುವ ಹೊತ್ತಿನಲ್ಲಿ ವಿಶ್ವದಾದ್ಯಂತ ರಾಷ್ಟ್ರಗಳ ನಾಯಕರುಗಳು ಅಗಲಿದ ಪೋಪ್ ಫ್ರಾನ್ಸಿಸ್ ಅವರಿಗೆ ಗೌರವ ಸಲ್ಲಿಸುವುದನ್ನು ಮುಂದುವರಿಸಿದ್ದಾರೆ.
ಯುರೋಪಿಯನ್ ಯೂನಿಯನ್ ಅಧ್ಯಕ್ಷೆ ರೋಬೆರ್ಥ ಮೆತ್ಸೋಲಾ ಅವರು ಸಭೆಯನ್ನು ಆರಂಭದಲ್ಲಿ ಉದ್ದೇಶಿಸಿ ಮಾತನಾಡಿದರು. " ಪೋಪ್ ಫ್ರಾನ್ಸಿಸ್ ಅವರು ನಮ್ಮ ಕಾಲದ ಅತ್ಯಂತ ಧೀಮಂತ ವ್ಯಕ್ತಿಯಾಗಿದ್ದರು. ನಮ್ಮ ನಡುವಿನ ನೈತಿಕ ಅಧಿಕಾರವಾಣಿ ಆಗಿದ್ದರು. ಸದಾ ಕರುಣೆ ಮತ್ತು ಐಕ್ಯತೆಯ ಸಂದೇಶವನ್ನು ನೀಡುತ್ತಿದ್ದರು. ಈ ಜಗತ್ತಿನಲ್ಲಿ ಸದಾ ಮಾನವೀಯತೆ ಹಾಗೂ ಶಾಂತಿಯ ಪ್ರಮುಖ ಧ್ವನಿಯಾಗಿದ್ದರು" ಎಂದು ವಿಶ್ವಗುರು ಫ್ರಾನ್ಸಿಸ್ ಅವರ ಪರಂಪರೆಯನ್ನು ಹೊಗಳಿದರು.
ಇದೆ ವೇಳೆ ಅವರು 2014ರಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಯುರೋಪಿಯನ್ ಸಂಸತ್ತಿಗೆ ಭೇಟಿ ನೀಡಿದ ಸಂದರ್ಭವನ್ನು ನೆನಪಿಸಿಕೊಂಡರು.
ಮುಂದುವರೆದು ಮಾತನಾಡಿದ ಅವರು " ಈ ಸಂಸತ್ತು ವಿಶ್ವಗುರು ಫ್ರಾನ್ಸಿಸ್ ಅವರ ಅಗಲಿಕೆಗೆ ಕಂಬನಿ ಮಿಡಿಯುತ್ತದೆ. ಅದೇ ರೀತಿ ಯೂರೋಪ್ ಖಂಡವು ಉತ್ತಮ ಹಾಗೂ ಬಲಿಷ್ಠ ಒಕ್ಕೂಟ ಮಾತ್ರವಲ್ಲದೆ ಮಾನವೀಯತೆಯ ಒಕ್ಕೂಟವಾಗಲು ವಿಶ್ವಗುರು ಫ್ರಾನ್ಸಿಸ್ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತದೆ" ಎಂದು ಅವರು ಹೇಳಿದರು. ಅಧ್ಯಕ್ಷರ ಮಾತಿಗೆ ಸದನದ ಎಲ್ಲಾ ಸದಸ್ಯರು ಸಹಮತವನ್ನು ವ್ಯಕ್ತಪಡಿಸಿದರು.
ಇದಲ್ಲದೆ ಸಂಸತ್ತಿನ ವಿವಿಧ ಪಕ್ಷಗಳ ನಾಯಕರು ಸೇರಿದಂತೆ ವಿರೋಧ ಪಕ್ಷದ ನಾಯಕರು ಸಹ ವಿಶ್ವಗುರು ಫ್ರಾನ್ಸಿಸ್ ಅವರ ಅಗಲಿಕೆಗೆ ಸಂತಾಪವನ್ನು ಸೂಚಿಸಿ ಅವರು ನಮ್ಮ ಕಾಲದ ಧೀಮಂತ ನಾಯಕ ಎಂದು ಬಣ್ಣಿಸಿದರು. ವಿಶ್ವಗುರು ಫ್ರಾನ್ಸಿಸ್ ಅವರು ಜಗತ್ತಿಗೆ ಸಾರಿದ ಶಾಂತಿಯ ಕ್ರಿಸ್ತೀಯ ಆದರ್ಶಗಳನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಒಕ್ಕರಲಾ ಅಭಿಪ್ರಾಯವನ್ನು ಮಂಡಿಸಿದರು.