ನಪೋಲಿ ಫುಟ್ಬಾಲ್ ಕ್ಲಬ್ ಸದಸ್ಯರನ್ನು ಭೇಟಿ ಮಾಡಿದ ಪೋಪ್ ಲಿಯೋ XIV
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ನಪೋಲಿ ಫುಟ್ಬಾಲ್ ತಂಡವು ಲೀಗ್ ಹಂತದಲ್ಲಿ ನಾಲ್ಕನೇ ಜಯವನ್ನು ದಾಖಲಿಸಿದ ನಂತರ, ಅವರನ್ನು ವ್ಯಾಟಿಕನ್ನಿನಲ್ಲಿ ಭೇಟಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು “ವೈಯಕ್ತಿಕ ವ್ಯಕ್ತಿಗಳಲ್ಲ; ಬದಲಿಗೆ ಚಾಂಪಿಯನ್’ಶಿಪ್’ಗಳನ್ನು ಗೆಲ್ಲುವುದು ತಂಡಗಳು” ಎಂದು ಹೇಳಿದ್ದಾರೆ.
ಕಳೆದ ಶುಕ್ರವಾರ ನಪೋಲಿ ಫುಟ್ಬಾಲ್ ಕ್ಲಬ್ ಇಟಾಲಿಯನ್ ಲೀಗ್ ಚಾಂಪಿಯನ್’ಶಿಪ್ ಗೆದ್ದಿದೆ. ಈ ತಂಡದ ಸದಸ್ಯರನ್ನು ಉದ್ದೇಶಿಸಿ ಮಾತನಾಡುವುದಕ್ಕೂ ಮೊದಲು ಪೋಪ್ ಹದಿನಾಲ್ಕನೇ ಲಿಯೋ ಅವರು ತಂಡದ ಪರಿಶ್ರಮದ ಕುರಿತು ಹಾಗೂ ತಂಡವಾಗಿ ಆಡುವುದರ ಪ್ರಾಮುಖ್ಯತೆಯ ಕುರಿತು ಮಾತನಾಡಿದ್ದಾರೆ.
ಪೋಪ್ ಹದಿನಾಲ್ಕನೇ ಲಿಯೋ ಅವರು ತಮ್ಮ ಭಾಷಣವನ್ನು ಓದುತ್ತಾ, ಆರಂಭದಲ್ಲಿ ತಂಡಕ್ಕೆ ಶುಭಾಶಯಗಳನ್ನು ಕೋರಿದ್ದಾರೆ. ತಂಡದ ಜಯವು ಇಡೀ ನೇಪಲ್ ಪ್ರಾಂತ್ಯದ ಜಯ ಎಂದು ಬಣ್ಣಿಸಿದ್ದಾರೆ.
ಭಾನುವಾರ ನಪೋಲಿ ತಂಡದ ಜಯಭೇರಿಯನ್ನು ಸಂಭ್ರಮಿಸಲು ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನ ರಸ್ತೆಗಳಲ್ಲಿ ಸೇರಿದ್ದರು.
ಮುಂದುವರೆದು ಮಾತನಾಡಿದ ಪೋಪ್ “ಹಿಂದೆ ತಂಡವೊಂದು ಗೆದ್ದಾಗ ಅದರಲ್ಲಿನ ಒಬ್ಬರೋ ಇಬ್ಬರೋ ಆಟಗಾರರಿಗೆ ಮಣೆ ಹಾಕಲಾಗುತ್ತಿತ್ತು. ಆದರೆ ಪರಿಸ್ಥಿತಿ ಹೀಗಿಲ್ಲ. ಬದಲಿಗೆ ಜಯ ಎಂಬುದು ಇಡೀ ತಂಡದ ಸಾಮೂಹಿಕ ಪ್ರಯತ್ನವಾಗಿದೆ” ಎಂದು ಹೇಳಿದರು. ಕ್ರೀಡಾಸ್ಪೂರ್ತಿಯ ಕುರಿತು ಮಾತನಾಡಿದ ಅವರು "ದುರಾದೃಷ್ಟವಶಾತ್, ಇಂದಿನ ಕಾಲಘಟ್ಟದಲ್ಲಿ ಕ್ರೀಡೆ ಎಂಬುದು ವ್ಯಾವಹಾರಿಕ ಸರಕಾಗಿದೆ. ಇದರಿಂದ ಮೌಲ್ಯಗಳು ಕುಸಿಯುತ್ತಿವೆ" ಎಂದು ಹೇಳಿದರು.
"ಪೋಷಕರು, ತರಭೇತುದಾರರು ಹಾಗೂ ಕ್ರೀಡೆಯಲ್ಲಿ ಸಕ್ರಿಯವಾಗಿರುವ ಎಲ್ಲರೂ ಸಹ ಕ್ರೀಡೆಯಲ್ಲಿನ ಮೌಲ್ಯಗಳನ್ನು ಪೋಷಿಸುವ ಮೂಲಕ, ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಬೇಕು" ಎಂದು ಹೇಳಿದರು. ಅಂತಿಮವಾಗಿ ಭೇಟಿಯನ್ನು ನೀಡಿದ್ದಕ್ಕಾಗಿ ತಂಡದ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.