ಸುಡಾನ್ ದೇಶದಲ್ಲಿ ಯುದ್ಧ ನಿಲ್ಲುವಂತೆ ಪೋಪ್ ಫ್ರಾನ್ಸಿಸ್ ಪ್ರಾರ್ಥನೆ
ವರದಿ: ವ್ಯಾಟಿಕನ್ ನ್ಯೂಸ್
ಪವಿತ್ರ ವಾರದ ಹೊಸ್ತಿಲಲ್ಲಿ ಪೋಪ್ ಫ್ರಾನ್ಸಿಸ್ ಅವರು ಸುಡಾನ್ ದೇಶದಲ್ಲಿ ಯುದ್ಧ ನಿಲ್ಲುವಂತೆ ಪ್ರಾರ್ಥಿಸಲು ಕರೆ ನೀಡಿದ್ದಾರೆ. ಮುಂದುವರೆದು ಮಾತನಾಡಿರುವ ಅವರು ಲೆಬನಾನ್ ಸೇರಿದಂತೆ ಯುದ್ಧ ನಿರತ ಎಲ್ಲಾ ದೇಶಗಳಿಗಾಗಿ ಪ್ರಾರ್ಥಿಸುವಂತೆ ಭಕ್ತಾಧಿಗಳಿಗೆ ಕರೆ ನೀಡಿದ್ದಾರೆ.
"ಏಪ್ರಿಲ್ 15 ಸುಡಾನ್‌ನಲ್ಲಿ ಸಂಘರ್ಷ ಆರಂಭವಾದ ಎರಡನೇ ದುಃಖದ ವರ್ಷಕ್ಕೆ ಕಾಲಿಟ್ಟಿದೆ. ಈ ಸಂಘರ್ಷದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಕುಟುಂಬಗಳು ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗುವಂತಾಗಿದೆ" ಎಂದು ಪೋಪ್ ಫ್ರಾನ್ಸಿಸ್ ಭಾನುವಾರ ವ್ಯಾಟಿಕನ್ ಮಾಧ್ಯಮ ಕಚೇರಿಯು ವಿತರಿಸಿದ ಸಂದೇಶದಲ್ಲಿ ಹೇಳಿದರು.
ದಕ್ಷಿಣ ಕೊರ್ಡೊಫಾನ್ ಮತ್ತು ಬ್ಲೂನೈಲ್ ರಾಜ್ಯಗಳಲ್ಲಿ ಕಳೆದ ವಾರ ಸೇನೆ ಮತ್ತು ಸುಡಾನ್ ಪೀಪಲ್ಸ್ ಲಿಬರೇಷನ್ ಮೂವ್‍ಮೆಂಟ್ ನಾರ್ಥ್(ಎಸ್‍ಪಿಎಲ್‍ಎಂ-ಎನ್)ನ ಗುಂಪಿನ ನಡುವೆ ಸಂಘರ್ಷ ಪುನರಾರಂಭಗೊಂಡಿತ್ತು. ದಕ್ಷಿಣ ಕೊರ್ಡೊಫಾನ್ ರಾಜ್ಯದ ರಾಜಧಾನಿ ಕಡುಗ್ಲಿಯಲ್ಲೇ ಕನಿಷ್ಠ 80 ಮಂದಿ ಸಾವನ್ನಪ್ಪಿರುವುದಾಗಿ ಸುಡಾನ್‍ಗೆ ವಿಶ್ವಸಂಸ್ಥೆಯ ಸ್ಥಾನಿಕ ಮತ್ತು ಮಾನವೀಯ ಸಂಯೋಜಕಿ ಕ್ಲೆಮೆಂಟಿನ್ ಎನ್‍ಕ್ವೆಟಾ ಸಲಾಮಿ ಹೇಳಿದ್ದಾರೆ.
2023ರ ಎಪ್ರಿಲ್‍ನಿಂದ ಸುಡಾನ್‍ನ ಸೇನೆ ಹಾಗೂ ಅರೆ ಸೇನಾಪಡೆ (ರ್ಯಾಪಿಡ್ ಸಪೋರ್ಟ್ ಫೋರ್ಸಸ್) ನಡುವೆ ಅಧಿಕಾರ ನಿಯಂತ್ರಣಕ್ಕಾಗಿ ಯುದ್ಧ ಮುಂದುವರಿದಿದ್ದು ವ್ಯಾಪಕ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ.