ಶಿಲುಬೆಹಾದಿ ಚಿಂತನೆಗಳನ್ನು ಸಿದ್ಧಪಡಿಸಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ನಿನ ಮಾಧ್ಯಮ ಕಚೇರಿಯು ಪೋಪ್ ಫ್ರಾನ್ಸಿಸ್ ಅವರು ದಿನೇ ದಿನೇ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಶುಭ ಶುಕ್ರವಾರದಂದು ರೋಮ್ ನಗರದ ಕೊಲೋಸಿಯಂನಲ್ಲಿ ನಡೆಯಲಿರುವ ಶಿಲುಬೆಹಾದಿಗೆ ಚಿಂತನೆಯನ್ನು ಪೋಪ್ ಫ್ರಾನ್ಸಿಸ್ ಅವರೇ ಸಿದ್ಧಪಡಿಸಿದ್ದಾರೆ ಎಂದು ಹೇಳಲಾಗಿದೆ.
ಪೋಪ್ ಫ್ರಾನ್ಸಿಸ್ ಅವರು ಫೆಬ್ರವರಿ ತಿಂಗಳಿಂದ ಮಾರ್ಚ್ ಕೊನೆಯ ವಾರದವರೆಗೂ ಉಸಿರಾಟದ ಸಮಸ್ಯೆಯ ಕಾರಣ ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಮಾರ್ಚ್ 23 ರಂದು ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಯಿತು. ಅಲ್ಲಿಂದ ಈವರೆಗೂ ಅವರು ತಮ್ಮ ನಿವಾಸ ಕಾಸಾ ಸಾಂತ ಮಾರ್ತದಲ್ಲಿ ಚೇತರಿಸಿಕೊಳ್ಳುತ್ತಿದ್ದರು.
ಇದೀಗ ಅವರ ಆರೋಗ್ಯವು ದಿನೇ ದಿನೇ ಉತ್ತಮವಾಗುತ್ತಿದೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ವರದಿ ಮಾಡಿದೆ.
ವ್ಯಾಟಿಕನ್ನಿನಲ್ಲಿ ನಡೆಯುವ ಪವಿತ್ರವಾರದ ಆಚರಣೆಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಪಾಲ್ಗೊಳ್ಳುತ್ತಾರೆ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ. ಆದರೆ ಈ ಕುರಿತ ಯಾವುದೇ ಮಾಹಿತಿಯನ್ನು ತಕ್ಷಣವೇ ನೀಡಲಾಗುತ್ತದೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಹೇಳಿದೆ.
ಇದೇ ವೇಳೆ ವ್ಯಾಟಿಕನ್ ಮಾಧ್ಯಮ ಕಚೇರಿಯು, ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ಕೊಲೊಸಿಯಂನಲ್ಲಿ ನಡೆಯಲಿರುವ ಶಿಲುಬೆಹಾದಿಗೆ ಚಿಂತನೆಯನ್ನು ಸಿದ್ಧಪಡಿಸಿದ್ದಾರೆ ಹಾಗೂ ಪವಿತ್ರವಾರದ ಆಚರಣೆಗಳಲ್ಲಿ ಯಾವ ಕಾರ್ಡಿನಲ್ಲುಗಳು ಪಾಲ್ಗೊಂಡು, ಮುನ್ನಡೆಸಬೇಕು ಎಂಬುದನ್ನೂ ಸಹ ಅವರು ಹೇಳಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ವರದಿ ಮಾಡಿದೆ.
ಪವಿತ್ರ ಗುರುವಾರದಂದು ಕಾರ್ಡಿನಲ್ ಡೊಮಿನಿಕೋ ಕ್ಯಾಲ್ಕಾಗ್ನೋ ಅವರು ತೈಲಗಳ ಪವಿತ್ರೀಕರಣ ಬಲಿಪೂಜೆಯನ್ನು ಮುನ್ನಡೆಸಲಿದ್ದಾರೆ.
ಶುಭ ಶುಕ್ರವಾರದಂದು ಕಾರ್ಡಿನಲ್ ಕ್ಲಾಡಿಯೋ ಗುಗೆರೊಟ್ಟಿ ಅವರು ಶಿಲುಬೆಹಾದಿಯನ್ನು ಮುನ್ನಡೆಸಲಿದ್ದಾರೆ. ರೋಮ್ ನಗರದ ಕೊಲೋಸಿಯಂನಲ್ಲಿ ನಡೆಯುವ ಶಿಲುಬೆಹಾದಿಯನ್ನು ಪೋಪ್ ಫ್ರಾನ್ಸಿಸ್ ಅವರ ವಿಕಾರ್ ಜನರಲ್ ಕಾರ್ಡಿನಲ್ ಬಾಲ್ದೆಸ್ಸೆರಿ ರೈನಾ ಅವರು ಮುನ್ನಡೆಸಲಿದ್ದಾರೆ.