ಪೋಪರ ಅಧಿಕೃತ ನಿವಾಸ ಕಾಸಾ ಸಾಂತ ಮಾರ್ತಾ ದ್ವಾರಗಳಿಗೆ ಮುದ್ರೆ
ವರದಿ: ವ್ಯಾಟಿಕನ್ ನ್ಯೂಸ್
ಪ್ರೇಷಿತ ಕೊಠಡಿಯ ಕ್ಯಾಮರಲೆಂಗೋ ಕಾರ್ಡಿನಲ್ ಕೆವಿನ್ ಫಾರೆಲ್ ಅವರು ಸೋಮವಾರ ಸಂಜೆ ಪೋಪ್ ಫ್ರಾನ್ಸಿಸ್ ಅವರ ಪಾರ್ಥೀವ ಶರೀರವನ್ನು ಪೆಟ್ಟಿಗೆಯಲ್ಲಿರಿಸುವ ವಿಧಾನದಲ್ಲಿ ಪಾಲ್ಗೊಂಡು, ಅದನ್ನು ನೆರವೇರಿಸಿದ್ದಾರೆ. ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರ ಕಾಸಾ ಸಾಂತ ಮಾರ್ತಾ ನಿವಾಸದ ಬಾಗಿಲುಗಳನ್ನು ಮುಚ್ಚಿ, ಅವುಗಳಿಗೆ ಮುದ್ರೆಯನ್ನು ಒತ್ತಲಾಗಿದೆ.
ಈ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ನಿಧನದ ಅಧಿಕೃತ ಹೇಳಿಕೆಯನ್ನು ಜೋರಾಗಿ ಓದಲಾಯಿತು. ಕಾರ್ಡಿನಲ್ ಕೆವಿನ್ ಫಾರೆಲ್ ಅವರು ಅದನ್ನು ಅನುಮೋದಿಸಿದರು. ಈ ವಿಧಿ ವಿಧಾನವು ಕೇವಲ ಒಂದು ಗಂಟೆಯೊಳಗಾಗಿ ಮುಕ್ತಾಯವಾಯಿತು.
ಪ್ರೇಷಿತ ಅರಮನೆಯ ಮೂರನೇ ಮಹಡಿಯಲ್ಲಿರುವ ಪೋಪರ ನಿವಾಸ ಕಾಸಾ ಸಾಂತ ಮಾರ್ತದ ದ್ವಾರಗಳಿಗೆ ಬೀಗವನ್ನು ಜಡಿದು, ಕಾರ್ಡಿನಲ್ ಕೆವಿನ್ ಫಾರೆಲ್ ಅವರ ಉಪಸ್ಥಿತಿಯಲ್ಲಿ ಅದಕ್ಕೆ ಮುದ್ರೆಯನ್ನು ಒತ್ತಲಾಯಿತು. ಮುದ್ರೆಯನ್ನು ಒತ್ತಿದ ನಂತರ ಕಾರ್ಡಿನಲ್ ಫಾರೆಲ್ ಅದನ್ನು ಧೃಡಪಡಿಸಿಕೊಂಡರು.
ಮಂಗಳವಾರ ಬೆಳಿಗ್ಗೆ ಕಾರ್ಡಿನಲ್ಲುಗಳ ಮೊದಲ ಮಹಾಸಭೆ ನಡೆಯಲಿದ್ದು, ಪೋಪ್ ಫ್ರಾನ್ಸಿಸ್ ಅವರ ಅಂತಿಮ ಸಂಸ್ಕಾರದ ಕುರಿತು ಮಾಹಿತಿ ಸಿಗಲಿದೆ.