ಪೋಪ್ ಫ್ರಾನ್ಸಿಸ್ ಅವರ ನಿಧನವನ್ನು ಅಧಿಕೃತವಾಗಿ ದೃಢೀಕರಿಸಿದ ಕಾರ್ಡಿನಲ್
ವರದಿ: ವ್ಯಾಟಿಕನ್ ನ್ಯೂಸ್
ಸೋಮವಾರ ಸಂಜೆ ಪೋಪ್ ಫ್ರಾನ್ಸಿಸ್ ಅವರ ಅಧಿಕೃತ ನಿವಾಸ ಕಾಸಾ ಸಾಂತ ಮಾರ್ತಾದ ಪ್ರಾರ್ಥನಾಲಯದಲ್ಲಿ ಕಾರ್ಡಿನಲ್ ಕ್ಯಾಮರಲೆಂಗೋ ಕೆವಿನ್ ಫಾರೆಲ್ ಅವರು ಪೋಪ್ ಫ್ರಾನ್ಸಿಸ್ ಅವರ ನಿಧನದ ವಿಧಿಯನ್ನು ಅಂದರೆ ಅವರ ಪಾರ್ಥೀವ ಶರೀರವನ್ನು ಪೆಟ್ಟಿಗೆಗೆ ಅಧಿಕೃತವಾಗಿ ಇರಿಸಿದ್ದಾರೆ. ತದ ನಂತರ ಪೋಪ್ ಫ್ರಾನ್ಸಿಸ್ ಅವರ ನಿವಾಸಕ್ಕೆ ಬೀಗ ಜಡಿದು, ವ್ಯಾಟಿಕನ್ ಮುದ್ರೆಯನ್ನು ಒತ್ತಿದ್ದಾರೆ.
ಈ ವಿಧಾನದಲ್ಲಿ ಕಾರ್ಡಿನಲ್ಲುಗಳ ಪರಿಷತ್ತಿನ ಡೀನ್ ಆಗಿರುವ ಕಾರ್ಡಿನಲ್ ಇವಾನಿ ಬತ್ತಿಸ್ತಾ ರೇ, ದಿವಂಗತ ಪೋಪ್ ಫ್ರಾನ್ಸಿಸ್ ಅವರ ಕುಟುಂಬಸ್ಥರು, ವ್ಯಾಟಿಕನ್ನಿನ ಆರೋಗ್ಯ ಸಚಿವಾಲಯದ ನಿರ್ದೇಶಕರಾಗಿರುವ ಡಾ. ಅಂದ್ರೇಯ ಅರ್ಕೇಂಜಲಿ, ಮತ್ತು ಉಪ ನಿರ್ದೇಶಕರಾಗಿರುವ ಡಾ. ಲುಯಿಜಿ ಕಾರ್ಬೋನೆ ಅವರು ಉಪಸ್ಥಿತರಿದ್ದರು.
ವ್ಯಾಟಿಕನ್ನಿನ ಮಾಧ್ಯಮ ಕಚೇರಿಯ ನಿರ್ದೇಶಕರಾಗಿರುವ ಡಾ. ಮತ್ತಿಯೋ ಬ್ರೂನಿ ಅವರ ಪ್ರಕಾರ ಬುಧವಾರ ಪೋಪ್ ಫ್ರಾನ್ಸಿಸ್ ಅವರ ಪಾರ್ಥೀವ ಶರೀರವನ್ನು ಸಂತ ಪೇತ್ರರ ಮಹಾದೇವಾಲಯಕ್ಕೆ ವರ್ಗಾಯಿಸಲಾಗುತ್ತದೆ. ಅಂದು ಸಾರ್ವಜನಿಕರು ಪೋಪ್ ಅವರ ಪಾರ್ಥೀವ ಶರೀರವನ್ನು ವೀಕ್ಷಿಸಿ, ಪ್ರಾರ್ಥಿಸ ಬಹುದಾಗಿದೆ.
ಪೋಪ್ ಫ್ರಾನ್ಸಿಸ್ ಅವರು ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಕಾರ್ಲೋ ಅಕ್ಯುಟಿಸ್ ಅವರ ಸಂತರ ಪದವಿಗೇರಿಸುವ ಪ್ರಕ್ರಿಯೆಯ ಬಲಿಪೂಜೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ತಿಳಿಸಿದೆ.