ವಿಶ್ವಗುರು ಫ್ರಾನ್ಸಿಸ್ ರವರ ಪಾರ್ಥಿವ ಶರೀರವನ್ನು ಸಂತ ಪೇತ್ರರ ಮಹಾದೇವಾಲಯಕ್ಕೆ ಕೊಂಡೊಯ್ಯಲಾಗಿದೆ
ಡೆವಿನ್ ವ್ಯಾಟ್ಕಿನ್ಸ್
ವಿಶ್ವಗುರು ಫ್ರಾನ್ಸಿಸ್ ರವರ ಪಾರ್ಥಿವ ಶರೀರದ ವರ್ಗಾವಣೆಯ ವಿಧಿಯು ಬುಧವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ನಡೆಯಿತು, ಅವರ ಮರಣದ ನಂತರ ರೋಮ್‌ನಲ್ಲಿ ಒಟ್ಟುಗೂಡಿದ ಕಾರ್ಡಿನಲ್ಸ್ ಒಕ್ಕೂಟದ ನೇತೃತ್ವದಲ್ಲಿ ಈ ಕ್ರಿಯೆಯು ನಡೆಯಿತು.
ಪವಿತ್ರ ರೋಮ್ ಧರ್ಮಸಭೆಯ ಕ್ಯಾಮರ್ಲೆಂಗೊ ಕಾರ್ಡಿನಲ್ ಕೆವಿನ್ ಫಾರೆಲ್ ರವರು, ಕಾಸಾ ಸಾಂತಾ ಮಾರ್ತ ಪ್ರಾರ್ಥನಾ ಮಂದಿರದಲ್ಲಿ ವಿಶ್ವಗುರು ಫ್ರಾನ್ಸಿಸ್ ರವರ ಆತ್ಮಕ್ಕೆ ಶಾಂತಿ ಸಿಗಲೆಂದು ಸಂಕ್ಷಿಪ್ತ ಪ್ರಾರ್ಥನೆಯೊಂದಿಗೆ ದೈವಾರಾಧನಾ ವಿಧಿಯನ್ನು ಪ್ರಾರಂಭಿಸಿದರು.
ಅವರ ಆರಂಭಿಕ ಪ್ರಾರ್ಥನೆಯಲ್ಲಿ, ಕಾರ್ಡಿನಲ್ ಫಾರೆಲ್ ರವರು, ದಿವಂಗತ ವಿಶ್ವಗುರುಗಳ 12 ವರ್ಷಗಳ ನಿಸ್ವಾರ್ಥ ಸೇವೆಗಾಗಿ ದೇವರಿಗೆ ಧನ್ಯವಾದ ಅರ್ಪಿಸಿದರು.
ನಾವು ಈಗ ಈ ಮನೆಯಿಂದ ಹೊರಡುವಾಗ, ತನ್ನ ಸೇವಕ ವಿಶ್ವಗುರು ಫ್ರಾನ್ಸಿಸ್ ರವರ ಮೂಲಕ ಕ್ರೈಸ್ತ ಜನತೆಗೆ ನೀಡಿದ ಅಸಂಖ್ಯಾತ ಉಡುಗೊರೆಗಳಿಗಾಗಿ ಪ್ರಭುದೇವರಿಗೆ ಧನ್ಯವಾದ ಹೇಳೋಣ ಎಂದು ಪ್ರಾರ್ಥಿಸಿದರು. ನಾವು ಆತನ ಕರುಣೆ ಮತ್ತು ದಯೆಯಿಂದ, ದಿವಂಗತ ವಿಶ್ವಗುರುವಿಗೆ ಸ್ವರ್ಗರಾಜ್ಯದಲ್ಲಿ ಶಾಶ್ವತವಾದ ನೆಲೆಯನ್ನು ನೀಡುವಂತೆ ಮತ್ತು ವಿಶ್ವಗುರುವಿನ ಕುಟುಂಬ, ರೋಮ್‌ನಲ್ಲಿರುವ ಧರ್ಮಸಭೆ ಮತ್ತು ವಿಶ್ವದಾದ್ಯಂತದ ಭಕ್ತವಿಶ್ವಾಸಿಗಳಿಗೆ ಸ್ವರ್ಗೀಯ ಭರವಸೆಯಿಂದ ಸಾಂತ್ವನ ನೀಡುವಂತೆ ಪ್ರಭುದೇವರಲ್ಲಿ ಪ್ರಾರ್ಥಿಸೋಣ ಎಂದು ಪ್ರಾರ್ಥಿಸಿದರು.
ನಂತರ ಕಾರ್ಡಿನಲ್ಸ್ ಒಕ್ಕೂಟವು, ವ್ಯಾಟಿಕನ್‌ನ ಸಾಂತಾ ಮಾರ್ತ ಚೌಕದ ಮೂಲಕ, ಮಹಾದೇವಾಲಯದ ಘಂಟೆಯ ಕಮಾನಿನ ಕೆಳಗೆ ಮತ್ತು ಸಂತ ಪೇತ್ರರ ಚೌಕಕ್ಕೆ ವಿಶ್ವಗುರು ಫ್ರಾನ್ಸಿಸ್ ರವರ ಪಾರ್ಥಿವ ಶರೀರದ ಶವಪೆಟ್ಟಿಗೆಯ ಮೆರವಣಿಗೆಯನ್ನು ಮುನ್ನಡೆಸಿದರು.
ದಿವಂಗತ ವಿಶ್ವಗುರು ಫ್ರಾನ್ಸಿಸ್ ರವರಿಗೆ ಗೌರವ ಸಲ್ಲಿಸಲು ಸರಿಸುಮಾರು 20,000ಕ್ಕೂ ಹೆಚ್ಚು ಜನರು ಚೌಕದಲ್ಲಿ ಜಮಾಯಿಸಿದ್ದರು, ಅವರ ಶವಪೆಟ್ಟಿಗೆಯನ್ನು ಮೆಟ್ಟಿಲುಗಳ ಮೇಲೆ ಮತ್ತು ಸಂತ ಪೇತ್ರರ ದೇವಾಲಯಕ್ಕೆ ತೆಗೆದುಕೊಂಡು ಹೋಗುವಾಗ ಜನರು ಶಾಂತರಾಗಿ, ಕೈ ಚಪ್ಪಾಳೆಯ ಮೂಲಕ ತಮ್ಮ ಗೌರವವನ್ನು ಸೂಚಿಸಿದರು.
ಮಹಾದೇವಾಲಯವು ಬುಧವಾರ ಮಧ್ಯರಾತ್ರಿಯವರೆಗೆ, ಗುರುವಾರ ಬೆಳಿಗ್ಗೆ 7 ರಿಂದ ಮಧ್ಯರಾತ್ರಿಯವರೆಗೆ ಮತ್ತು ಶುಕ್ರವಾರ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ.
ಏಪ್ರಿಲ್ 25, ಶುಕ್ರವಾರ ರಾತ್ರಿ 8 ಗಂಟೆಗೆ ವಿಶ್ವಗುರು ಫ್ರಾನ್ಸಿಸ್ ರವರ ಪಾರ್ಥಿವ ಶರೀರದ ಶವಪೆಟ್ಟಿಗೆಯನ್ನು ಮುಚ್ಚುವ ವಿಧಿವಿಧಾನದ ಅಧ್ಯಕ್ಷತೆಯನ್ನು ಕಾರ್ಡಿನಲ್ ಕ್ಯಾಮರ್ಲೆಂಗೊ ಕೆವಿನ್ ಫಾರೆಲ್ ರವರು ವಹಿಸಲಿದ್ದಾರೆ.
ವಿಶ್ವಗುರು ಫ್ರಾನ್ಸಿಸ್ ರವರ ಅಂತ್ಯಕ್ರಿಯೆಯ ದಿವ್ಯಬಲಿಪೂಜೆಯು ಏಪ್ರಿಲ್ 26ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಸಂತ ಪೇತ್ರರ ಮಹಾದೇವಾಲಯದ ಚೌಕದಲ್ಲಿ ಕಾರ್ಡಿನಲ್ಸ್ ಒಕ್ಕೂಟದ, ಡೀನ್ ಕಾರ್ಡಿನಲ್ ಜಿಯೋವಾನಿ ಬಟಿಸ್ಟಾರೆರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ವಿಶ್ವಗುರು ಫ್ರಾನ್ಸಿಸ್ ರವರಿಗೆ ಅಂತಿಮವಾಗಿ ವಿದಾಯ ಹೇಳಲು ಅವರೊಂದಿಗೆ ಪ್ರಪಂಚದಾದ್ಯಂತದ ಪಿತೃಪ್ರಧಾನರು, ಕಾರ್ಡಿನಲ್ಸ್, ಮಹಾಧರ್ಮಾಧ್ಯಕ್ಷರುಗಳು, ಧರ್ಮಾಧ್ಯಕ್ಷರುಗಳು, ಯಾಜಕರು, ಅಭಿಷೇಕಿಸಲ್ಪಟ್ಟ ಧಾರ್ಮಿಕ ಪುರಷರು ಹಾಗೂ ಸಹೋದರಿಯರು ಮತ್ತು ಸಾಮಾನ್ಯ ಭಕ್ತವಿಶ್ವಾಸಿಗಳು ಭಾಗವಹಿಸಲಿದ್ದಾರೆ.
ಶನಿವಾರದಂದು ದಿವ್ಯಬಲಿಪೂಜೆಯ ಕೊನೆಯಲ್ಲಿ, ದಿವಂಗತ ವಿಶ್ವಗುರುಗಳ ಪಾರ್ಥೀವ ಶರೀರವನ್ನು ಸಂತ ಪೇತ್ರರ ಮಹಾದೇವಾಲಯಕ್ಕೆ ತೆಗೆದುಕೊಂಡು ಹೋಗಿ ನಂತರ ಸೇಂಟ್ ಮೇರಿ ಮೇಜರ್ ಮಹಾದೇವಾಲಯಕ್ಕೆ ಕರೆದೊಯ್ಯಲಾಗುತ್ತದೆ, ಅಲ್ಲಿ ಅವರನ್ನು ಸಮಾಧಿ ಮಾಡಲಾಗುತ್ತದೆ.