ಪೋಪ್: ಧರ್ಮಸಭೆ ಹೊಸ, ಸಂಧಾನಗೊಂಡ ಮಾನವೀಯತೆಯಾಗಿದೆ
ವರದಿ: ವ್ಯಾಟಿಕನ್ ನ್ಯೂಸ್
ಕರೀಸ್-ಕ್ಯಾಥೊಲಿಕ್ ಕ್ಯಾರಿಸ್ಮ್ಯಾಟಿಕ್ ಇಂಟರ್ನಾಷ್ಯನಲ್ ಸರ್ವೀಸ್ ಸದಸ್ಯರು ರೋಮ್ ನಗರಕ್ಕೆ ಜ್ಯೂಬಿಲಿ ಯಾತ್ರೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಅವರಿಗೆ ಸಂದೇಶವನ್ನು ನೀಡಿದ್ದಾರೆ. ಈ ಸಂದೇಶದಲ್ಲಿ ಅವರನ್ನು ಉದ್ದೇಶಿಸಿ ಮಾತನಾಡಿರುವ ಅವರು "ಪವಿತ್ರಾತ್ಮರು ಸಹಭಾಗಿತ್ವದ, ಸಹಯೋಗದ ಹಾಗೂ ಸೋದರತೆಯ ಮೂಲ ಆಗರವಾಗಿದ್ದಾರೆ" ಎಂದು ಹೇಳಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಯಾತ್ರೆಯನ್ನು ಆರಂಭಿಸುತ್ತಿರುವ ಅವರಿಗೆ ಶುಭಾಶಯಗಳನ್ನು ಕೋರುವುದರ ಮೂಲಕ ತಮ್ಮ ಸಂದೇಶವನ್ನು ಆರಂಭಿಸಿದ್ದಾರೆ. "ನೀವು ಧರ್ಮಸಭೆಯ ಹೃದಯ ಭಾಗಕ್ಕೆ ಯಾತ್ರೆಯನ್ನು ಕೈಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಧರ್ಮಸಭೆಗಾಗಿ ಹಾಗೂ ಇಡೀ ಪ್ರಪಂಚಕ್ಕಾಗಿ ಪ್ರಾರ್ಥಿಸುವುದಕ್ಕೆ ಇದು ಸುಸಮಯವಾಗಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಈ ಯಾತ್ರೆಯ ಆಧ್ಯಾತ್ಮಿಕ ಅನುಭವ ಎಂಬುದು ನಿಮಗೆ ಮಾತ್ರವಲ್ಲ" ಎಂದು ಹೇಳಿದ್ದಾರೆ. "ಭರವಸೆ ಹಾಗೂ ಶಾಂತಿಯ ಅಂಶವಾಗಿ ಈ ಆಧ್ಯಾತ್ಮಿಕ ಅನುಭವವನ್ನು ನೀವು ಜಗತ್ತನೊಂದಿಗೆ ಹಂಚಿಕೊಳ್ಳಬೇಕು" ಎಂದು ಈಗಷ್ಟೇ ನ್ಯುಮೋನಿಯಾದಿಂದ ಚೇತರಿಸಿಕೊಳ್ಳುತ್ತಿರುವ ಪೋಪ್ ಫ್ರಾನ್ಸಿಸ್ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
"ಪವಿತ್ರಾತ್ಮರು ಈ ನಿಮ್ಮ ಯಾತ್ರೆಯ ಸಂದರ್ಭದಲ್ಲಿ ಸಹಭಾಗಿತ್ವದ, ಸಹಯೋಗದ ಹಾಗೂ ಸೋದರತೆಯ ಮಾರ್ಗದರ್ಶಿಯಾಗಿ ನಿಮ್ಮೊಡನೆ ಇರುತ್ತಾರೆ. ನಿಮ್ಮ ಆಧ್ಯಾತ್ಮಿಕ ಯಾತ್ರಾ ಪ್ರಯಾಣದಲ್ಲಿ ಅವರನ್ನು ನೀವು ಆಲಿಸಿ, ಮುನ್ನಡೆಯಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಕರೀಸ್-ಕ್ಯಾಥೊಲಿಕ್ ಕ್ಯಾರಿಸ್ಮ್ಯಾಟಿಕ್ ಇಂಟರ್ನಾಷ್ಯನಲ್ ಸರ್ವೀಸ್ ಸದಸ್ಯರಿಗೆ ಹೇಳಿದ್ದಾರೆ.