ಪೋಪ್ ಫ್ರಾನ್ಸಿಸ್: ಕುರಿಮಂದೆಯನ್ನು ಚೆನ್ನಾಗಿ ಅರಿತ ಕುರಿಗಾಹಿ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ 88 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಥೋಲಿಕ ಧರ್ಮಸಭೆಯ ಮೊದಲ ಯುರೋಪಿಯನ್ ಅಲ್ಲದ ಪೋಪ್ ಆಗಿದ್ದ ಪೋಪ್ ಫ್ರಾನ್ಸಿಸ್ (88) ಅವರು ಡಬಲ್ ನ್ಯುಮೋನಿಯಾದಿಂದ ಆಸ್ಪತ್ರೆಯಲ್ಲಿ 38 ದಿನಗಳನ್ನು ಕಳೆದ ನಂತರ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಿಂದಾಗಿ ಇಂದು ನಿಧನರಾದರು.
ಅರ್ಜೆಂಟೀನಾದಿಂದ ಬಂದ ಪೋಪ್ ಫ್ರಾನ್ಸಿಸ್ ಅವರು ತಮ್ಮ ವಿನಮ್ರ ಶೈಲಿ, ಬಡವ ಮತ್ತು ದೀನರ ಬಗ್ಗೆ ಕಾಳಜಿ, ಹಾಗೂ LGBTQ+ ಸಮುದಾಯ, ಬಂಡವಾಳಶಾಹಿ, ಮತ್ತು ಹವಾಮಾನ ಬದಲಾವಣೆಯ ಕುರಿತಾದ ತಮ್ಮ ಪ್ರಗತಿಶೀಲ ನಿಲುವುಗಳಿಂದ ಜಗತ್ತಿನ ಗಮನ ಸೆಳೆದಿದ್ದರು.
ಮುಂದುವರೆದು, ತಮ್ಮ ನಿಧನಕ್ಕೆ ಒಂದು ದಿನ ಮೊದಲು, ಅಂದರೆ ಈಸ್ಟರ್ ಭಾನುವಾರ (ಏಪ್ರಿಲ್ 20, 2025) ರಂದು, ಪೋಪ್ ಫ್ರಾನ್ಸಿಸ್ ಸೇಂಟ್ ಪೀಟರ್ಸ್ ಚೌಕದಲ್ಲಿ ತಮ್ಮ ಕೊನೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾವಿರಾರು ಜನರನ್ನು ಆಶೀರ್ವದಿಸಿದರು. ಡಬಲ್ ನ್ಯುಮೋನಿಯಾದಿಂದ ದುರ್ಬಲರಾಗಿದ್ದರೂ, ಕಾಣಿಸಿಕೊಂಡ ಅವರನ್ನು ಜನರು ಚಪ್ಪಾಳೆ ಮತ್ತು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು.
ಇನ್ನು ಅವರ ತಮ್ಮ ಈಸ್ಟರ್ ಭಾಷಣದಲ್ಲಿ, ಯೇಸುಕ್ರಿಸ್ತನ ಪುನರುತ್ಥಾನವನ್ನು ಮಾನವ ಭರವಸೆಯ ಮೂಲಾಧಾರವೆಂದು ಘೋಷಿಸಿ, ಶಾಂತಿ, ಸ್ವಾತಂತ್ರ್ಯ, ಮತ್ತು ಪರಸ್ಪರ ನಂಬಿಕೆಯನ್ನು ಒತ್ತಿ ಹೇಳಿದರು. ವಿಶೇಷವಾಗಿ ಗಾಜಾದಂತಹ ಪ್ರದೇಶಗಳಲ್ಲಿ ಘರ್ಷಣೆಯನ್ನು ಕೊನೆಗೊಳಿಸುವಂತೆ ಮನವಿ ಮಾಡಿದರು. ಇದಕ್ಕೂ ಮೊದಲು ಪೋಪ್ ಫ್ರಾನ್ಸಿಸ್ ಅವರು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರೊಂದಿಗೆ ಖಾಸಗಿ ಸಭೆ ನಡೆಸಿ, ಈಸ್ಟರ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಇದೇ ವೇಳೆ, ವ್ಯಾನ್ಸ್‌ರ ಮಕ್ಕಳಿಗೆ ಮೂರು ಚಾಕೊಲೇಟ್ ಈಸ್ಟರ್ ಎಗ್‌ಗಳನ್ನು ಉಡುಗೊರೆಯಾಗಿ ನೀಡಿದರು. ಹಿಂದಿನ ದಿನ, ವ್ಯಾನ್ಸ್ ವ್ಯಾಟಿಕನ್ ಅಧಿಕಾರಿಗಳೊಂದಿಗೆ ಔಪಚಾರಿಕ ಮಾತುಕತೆ ನಡೆಸಿದ್ದರು, ಆದರೆ ಅನಾರೋಗ್ಯದಿಂದ ಪೋಪ್ ಹಾಜರಾಗಿರಲಿಲ್ಲ.