ಪೋಪ್ ಫ್ರಾನ್ಸಿಸ್ ಅವರಿಗೆ ಮೆಕಾನಿಕಲ್ ವೆಂಟಿಲೇಟರ್ ಅಗತ್ಯವಿಲ್ಲ
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ನಿನ ಮಾಧ್ಯಮ ಕಚೇರಿಯು ಪೋಪ್ ಫ್ರಾನ್ಸಿಸ್ ಅವರಿಗೆ ಈಗ ಯಾವುದೇ ರೀತಿಯ ಮೆಕಾನಿಕಲ್ ವೆಂಟಿಲೇಟರ್ ಅಗತ್ಯವಿಲ್ಲ ಎಂದು ಹೇಳಿದೆ. ಆ ಮೂಲಕ ಪೋಪ್ ಫ್ರಾನ್ಸಿಸ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ.
ಪೋಪ್ ಫ್ರಾನ್ಸಿಸ್ ಅವರು ಆಸ್ಪತ್ರೆಯಲ್ಲಿ ಮತ್ತೊಮ್ಮೆ ವಿಶ್ರಾಂತಿಯ ರಾತ್ರಿಯನ್ನು ಕಳೆದಿದ್ದಾರೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಪೀಠದ ಪತ್ರಿಕಾ ಹೇಳಿಕೆಯು ವರದಿ ಮಾಡಿದೆ. ಅದೇ ರೀತಿ, ಇನ್ನೂ ಸಹ ಪೋಪ್ ಫ್ರಾನ್ಸಿಸ್ ಅವರಿಗೆ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ ಎಂದು ಹೇಳಲಾಗಿದೆ.
ಪೋಪ್ ಅವರ ಕ್ಲಿನಿಕಲ್ ಚಿತ್ರದ ಸಂಕೀರ್ಣತೆ ಮತ್ತು ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ಇದ್ದ ತೀವ್ರವಾದ ಸೋಂಕನ್ನು ಗಮನಿಸಿದರೆ, "ಆಸ್ಪತ್ರೆಯಲ್ಲಿ ಸ್ವಲ್ಪ ಸಮಯದವರೆಗೆ ಔಷಧೀಯ ಚಿಕಿತ್ಸೆಯನ್ನು ಮುಂದುವರಿಸುವುದು ಇನ್ನೂ ಅಗತ್ಯವಾಗಿರುತ್ತದೆ" ಎಂದು ವ್ಯಾಟಿಕನ್ ಮಾಧ್ಯಮ ವರದಿಯು ವಿವರಿಸಿದೆ.
ಪೋಪ್ ಫ್ರಾನ್ಸಿಸ್ ಅವರು ಕೂರಿಯಾದ ಆಧ್ಯಾತ್ಮಿಕ ಕ್ರಮಗಳನ್ನು ವಿಡಿಯೋ ಮೂಲಕ ವೀಕ್ಷಿಸುವ ಮೂಲಕ, ಕೂರಿಯಾದ ಇತರ ಸದಸ್ಯರೊಂದಿಗೆ ಐಕ್ಯಮತ್ಯವನ್ನು ವ್ಯಕ್ತಪಡಿಸಿದ್ದಾರೆ. ಭಾನುವಾರ ಮಧ್ಯಾಹ್ನ ಪೋಪ್ ಆರನೇ ಪೌಲರ ಸಭಾಂಗಣದಲ್ಲಿ ಈ ಆಧ್ಯಾತ್ಮಿಕ ಕ್ರಮಗಳನ್ನು ಪೋಪರ ನಿವಾಸದ ಅಧಿಕೃತ ಪ್ರಬೋಧಕರಾಗಿರುವ ಕಪುಚಿನ್ ಸಭೆಯ ಫಾದರ್ ರೊಬೆರ್ತೊ ಪಸೋಲಿನಿ ಅವರು ಆರಂಭಿಸಿದ್ದಾರೆ.