ಪೋಪ್: ಬೂದಿ ವಾಸ್ತವಕ್ಕೆ ನಮ್ಮನ್ನು ಮರಳಿ ತರುತ್ತದೆ
ವರದಿ: ವ್ಯಾಟಿಕನ್ ನ್ಯೂಸ್
ಬೂದಿ ಬುಧವಾರಕ್ಕೆ ಪೋಪ್ ಫ್ರಾನ್ಸಿಸ್ ಅವರು ಸಿದ್ಧಪಡಿಸಿದ ಪ್ರಬೋಧನೆಯನ್ನು ಜನತೆಗಾಗಿ ಕಾರ್ಡಿನಲ್ ದೆ ದೊನಾಟಿಸ್ ಅವರು ಬಲಿಪೂಜೆಯನ್ನು ಅರ್ಪಿಸುವ ವೇಳೆ ಓದಿ ಹೇಳಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರಬೋಧನೆಯಲ್ಲಿ ಬೂದಿ ವಾಸ್ತವಕ್ಕೆ ನಮ್ಮನ್ನು ಮರಳಿ ತರುತ್ತದೆ ಎಂದು ಹೇಳಿದ್ದಾರೆ.
ಪ್ರಬೋಧನೆಗೂ ಮುಂಚಿತವಾಗಿ ಕಾರ್ಡಿನಲ್ ದೆ ದೊನಾತಿಸ್ ಅವರು ಪೋಪ್ ಫ‌್ರಾನ್ಸಿಸ್ ಅವರ ಮಾತುಗಳಿಗೆ ಕಿವಿಗೊಡುವಂತೆ ಭಕ್ತಾಧಿಗಳಲ್ಲಿ ವಿನಂತಿಸಿಕೊಂಡರು. ಮುಂದುವರೆದು ಮಾತನಾಡಿದ ಅವರು "ಈ ಸಂದರ್ಭದಲ್ಲಿ ನಾವು ಅವರೊಂದಿಗೆ ಐಕ್ಯತೆಯಲ್ಲಿರಬೇಕು. ಅವರಿಗಾಗಿ ಪ್ರಾರ್ಥಿಸಬೇಕು. ಪೋಪ್ ಫ್ರಾನ್ಸಿಸ್ ಅವರು ತಮ್ಮ ಯಾತನೆಯನ್ನು ಅಖಿಲ ವಿಶ್ವ ಧರ್ಮಸಭೆಯ ಒಳಿತಿಗಾಗಿ ಅರ್ಪಿಸುತ್ತಿದ್ದಾರೆ" ಎಂದು ಕಾರ್ಡಿನಲ್ ದೆ ದೊನಾತಿಸ್ ಅವರು ಹೇಳಿದರು.
ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರಬೋಧನೆಯಲ್ಲಿ "ನಾವು ಬೂದಿಯನ್ನು ಹಣೆಯ ಮೇಲೆ ಹಚ್ಚಿಸಿಕೊಳ್ಳುವ ಸಲುವಾಗಿ ತಲೆ ಬಾಗುತ್ತೇವೆ. ಇದರ ಅರ್ಥ ನಾವು ನಮ್ಮನ್ನು ಆಂತರಿಕವಾಗಿ ಪರೀಕ್ಷಿಸಿಕೊಳ್ಳಬೇಕಾಗಿದೆ. ನಮ್ಮೆಲ್ಲಾ ಬಲಹೀನತೆಗಳ ನಡುವೆಯೂ ಸಹ ನಾವು ನಮ್ಮನ್ನೇ ಪಶ್ಚಾತಾಪದಿಂದ ಪರೀಕ್ಷಿಸಿಕೊಂಡು, ಪ್ರಭುವಿನ ಹಾದಿಗೆ ಮರಳಲು ಪ್ರಯತ್ನಿಸಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ನಾವು ಕೆಲವೊಮ್ಮೆ ಈ ವಾಸ್ತವಗಳಿಂದ ಪಲಾಯನ ಮಾಡಲು ಪ್ರಯತ್ನಿಸಿದರೂ, ಬೂದಿಯನ್ನು ಲೇಪಿಸಿಕೊಳ್ಳುವುದು "ನಾವು ಯಾರೆಂಬುದನ್ನು ನಮಗೆ ನೆನಪಿಸುತ್ತದೆ" ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.
"ಮಣ್ಣಿನಿಂದ ಉಂಟಾದ ನಾವು ಮರಳಿ ಮಣ್ಣಿಗೆ ಸೇರುತ್ತೇವೆ" ಎಂದು ಪೋಪ್ ಫ್ರಾನ್ಸಿಸ್ ಅವರು ಕೊನೆಯಲ್ಲಿ ಹೇಳಿದರು.