ಝೆಕ್ ಯಾತ್ರಿಕರಿಗೆ ಪೋಪ್: ವಿಶ್ವಾಸವನ್ನು ಸಂತೋಷದಿಂದ ಹಂಚಿಕೊಳ್ಳಬೇಕು
ವರದಿ: ವ್ಯಾಟಿಕನ್ ನ್ಯೂಸ್
ಜ್ಯೂಬಿಲಿಗಾಗಿ ರೋಮ್ ನಗರಕ್ಕೆ ಯಾತ್ರಿಕರಾಗಿ ಆಗಮಿಸಿರುವ ಭಕ್ತಾಧಿಗಳಿಗೆ ಪೋಪ್ ಫ್ರಾನ್ಸಿಸ್ ಅವರು ಸಂದೇಶವನ್ನು ಕಳುಹಿಸಿದ್ದಾರೆ. ತಮ್ಮ ಸಂದೇಶದಲ್ಲಿ ಅವರು ವಿಶ್ವಾಸವನ್ನು ನಾವು ಇತರರೊಂದಿಗೆ ಸಂತೋಷದಿಂದ ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ನ್ಯುಮೋನಿಯಾದಿಂದ ಚೇತರಿಸಿಕೊಳ್ಳುತ್ತಿದ್ದು, ರೋಮ್ ನಗರಕ್ಕೆ ಆಗಮಿಸಿರುವ ಜೆಕ್ ಗಣರಾಜ್ಯದ ಭಕ್ತಾಧಿಗಳೊಂದಿಗೆ ಆಧ್ಯಾತ್ಮಿಕವಾಗಿ ಜೊತೆಯಾಗಿದ್ದು, ಅವರಿಗೆ ಪ್ರಭುವಿನ ಹೆಜ್ಜೆಗಳಲ್ಲಿ ನಡೆಯುವ ಕುರಿತು ಹೇಳಿದ್ದಾರೆ.
ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ತಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದು, ನಾನು ನಿಮ್ಮೊಡನೆ ಭೌತಿಕವಾಗಿ ಇರಲು ಸಾಧ್ಯವಾಗಲಿಲ್ಲ, ಅದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ. "ಈ ನಿಮ್ಮ ಪಯಣ ನಿಮ್ಮ ವಿಶ್ವಾಸವನ್ನು ನವೀಕರಿಸಲು ನೀವು ಮಾಡುತ್ತಿರುವ ಪ್ರಯತ್ನಕ್ಕೆ ಸಾಕ್ಷಿಯಾಗಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಜೆಕ್ ಯಾತ್ರಿಕರನ್ನು ಉದ್ದೇಶಿಸಿ ಹೇಳಿದರು. ಮುಂದುವರೆದು ಮಾತನಾಡಿದ ಅವರು ಸಂತೋಷದಿಂದ ಪ್ರಭುವನ್ನು ಹಿಂಬಾಲಿಸಿ ಹಾಗೂ ನಿಮ್ಮ ವಿಶ್ವಾಸವನ್ನು ಇತರರೊಂದಿಗೆ ಹಂಚಿಕೊಳ್ಳಿರಿ ಎಂದು ಹೇಳಿದರು.
ಜೆಕ್ ಯಾತ್ರಿಕರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ನಿಮ್ಮದೇ ತಾಯ್ನಾಡಿನ ಆಧ್ಯಾತ್ಮಿಕತೆಯ ಜ್ವಲಂತ ಉದಾಹರಣೆಗಳಾದ ಸಂತ ಅಡಾಲ್ಬರ್ಟ್, ಸಂತ ಸಿರಿಲ್ ಹಾಗೂ ಸಂತ ಮೆಥೋಡಿಯಸ್ ಅವರನ್ನು ಹಿಂಬಾಲಿಸಬೇಕು ಹಾಗೂ ಅವರ ಆದರ್ಶಗಳ ಮೂಲಕ ಪ್ರಭುವಿಗೆ ನಾವು ಹತ್ತಿರವಾಗಬೇಕು" ಎಂದು ಅವರಿಗೆ ಹೇಳಿದರು.
ಅಂತಿಮವಾಗಿ "ಕ್ರೈಸ್ತರು ಶುಭಸಂದೇಶವನ್ನು ಪ್ರೀತಿ ಹಾಗೂ ತ್ಯಾಗದಿಂದ ಬಿತ್ತಲು ಕರೆಯನ್ನು ಹೊಂದಿದ್ದಾರೆ" ಎಂದು ಹೇಳಿದರು.