ಶಾಂತಿಗಾಗಿ ಪ್ರತಿದಿನವೂ ಪ್ರಾರ್ಥಿಸಬೇಕೆಂದು ಕಥೋಲಿಕರಿಗೆ ಕರೆ ನೀಡಿದ ಪೋಪ್ ಫ್ರಾನ್ಸಿಸ್
ವರದಿ: ಜೋಸೆಫ್ ಟಲ್ಲೋಚ್
ಪೋಪ್ ಫ್ರಾನ್ಸಿಸ್ ಅವರು ಇಂದಿನ ಸಾರ್ವಜನಿಕ ಭೇಟಿಯಲ್ಲಿ ಜಗತ್ತಿನಲ್ಲಿ ಶಾಂತಿ ಸ್ಥಾಪನೆಯಾಗಲು ಪ್ರತಿ ದಿನವೂ ಕಥೋಲಿಕರು ಪ್ರಾರ್ಥಿಸಬೇಕೆಂದು ಕರೆ ನೀಡಿದ್ದಾರೆ.
ಬುಧವಾರ ಸಾರ್ವಜನಿಕ ಭೇಟಿಯ ನಂತರ ಪೋಪ್ ಫ್ರಾನ್ಸಿಸ್ ಅವರು ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದು "ಪ್ರಸ್ತುತ ಯುದ್ಧಗ್ರಸ್ಥವಾಗಿರುವ ಎಲ್ಲಾ ದೇಶಗಳನ್ನು ನಾನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ. ಪ್ರೀತಿಯ ಸಹೋದರ-ಸಹೋದರಿಯರೇ, ದಯವಿಟ್ಟು ಈ ಜಗತ್ತಿನಲ್ಲಿ ಶಾಂತಿ ಮೂಡಲು ಪ್ರತಿ ದಿನವೂ ಪ್ರಾರ್ಥಿಸಿ" ಎಂದು ಹೇಳಿದ್ದಾರೆ.
"ನಾವು ಹುಟ್ಟಿರುವುದು ಒಬ್ಬರನ್ನೊಬ್ಬರು ಕೊಲ್ಲಲು ಅಲ್ಲ. ಬದಲಿಗೆ ಪರಸ್ಪರ ನೆರವಾಗಲು. ಶಾಂತಿಯ ಹಾದಿಗಳನ್ನು ನಾವೆಲ್ಲರೂ ಹುಡುಕೋಣ. ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸೋಣ" ಎಂದು ಪೋಪ್ ನುಡಿದರು.
ಯೇಸುವಿನ ಜನನದ ಕುರಿತು ಧರ್ಮೋಪದೇಶ
ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ನಗರದ ಸಂತ ಪೇತ್ರರ ಚೌಕದಲ್ಲಿ ಸಾರ್ವಜನಿಕ ಭೇಟಿಯಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದು, "ಯೇಸು ಕ್ರಿಸ್ತರೇ ನಮ್ಮ ಭರವಸೆ" ಎಂಬುದರ ಮೇಲೆ ಧರ್ಮೋಪದೇಶವನ್ನು ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಯೇಸುವಿನ ಜನನಕ್ಕೆ ದೀನರು, ನಿರ್ಗತಿಕರು ಸಾಕ್ಷಿಗಳಾಗಿದ್ದಾರೆ ಎಂದು ಹೇಳಿದ್ದಾರೆ.
"ತಮ್ಮ ಜನನಕ್ಕೂ ಮುಂಚಿತವಾಗಿಯೇ ಪ್ರಭು ಕ್ರಿಸ್ತರು ಮಾತೆ ಮರಿಯಮ್ಮನವರ ಉದರದಲ್ಲಿ ನಮ್ಮ ಜೊತೆ ಪಯಣಿಸಿದರು. ಮಾತೆ ಮರಿಯ ಎಲಿಜಬೇತಳನ್ನು ಸಂಧಿಸಿದಾಗ, ಸಂತ ಜೋಸೆಫರ ಜೊತೆಗೆ ಹಾಗೂ ನಮ್ಮೆಲ್ಲರ ಜೊತೆಗೆ ಅವರು ಸಂಚರಿಸಿದರು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಏಸುಕ್ರಿಸ್ತರು ಸಾಧಾರಣ ಅರಸರಂತೆ ಜನ್ಮ ತಾಳಲಿಲ್ಲ ಬದಲಿಗೆ ಒಂದು ಮನೆಯ ಹಿಂದೆ ಪ್ರಾಣಿಗಳು ಜೀವಿಸುವ ಕೊಟ್ಟಿಗೆಯಲ್ಲಿ ಅವರು ನಮಗಾಗಿ ಸಾಮಾನ್ಯ ಮನುಷ್ಯನಂತೆ ಹುಟ್ಟಿದರು ಎಂದು ವಿಶ್ವಗುರು ಫ್ರಾನ್ಸಿಸ್ ಅವರು ತಮ್ಮ ಸಾರ್ವಜನಿಕ ದರ್ಶನದ ವೇಳೆ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು.