ಶಾಂತಿಗಾಗಿ ಮತ್ತೆ ಮನವಿ ಮಾಡಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಇಂದು ಭಾನುವಾರ ತ್ರಿಕಾಲ ಪ್ರಾರ್ಥನೆಯ ನಂತರ ವಿಶ್ವ ಶಾಂತಿಗಾಗಿ ಮತ್ತೆ ಮನವಿಯನ್ನು ಮಾಡಿದ್ದಾರೆ. ಯುದ್ಧ, ದಾಳಿ, ಹಿಂಸೆ ಹಾಗೂ ನಾನಾ ರೀತಿಯ ಶಸ್ತ್ರಸಜ್ಜಿತ ಹೋರಾಟಗಳಲ್ಲಿ ಮುಗ್ಧರು ವಿಶೇಷವಾಗಿ ಮಕ್ಕಳು ತಮ್ಮದಲ್ಲದ ತಪ್ಪಿಗೆ ಮರಣವನ್ನು ಹೊಂದುತ್ತಿದ್ದಾರೆ. ಯಾವುದೇ ಉದ್ದೇಶಕ್ಕಾಗಿ ನಾವು ಮಾಡುವ ಹಿಂಸೆ ಅಪರಾಧವಾಗಿದೆ ಎಂದು ಹೇಳುವ ಪೋಪ್ ಫ್ರಾನ್ಸಿಸ್ ಅವರು ಜಗತ್ತಿನಲ್ಲಿ ಸದಾ ಶಾಂತಿ ನೆಲೆಸಬೇಕೆಂಬ ತಮ್ಮ ಅಭಿಲಾಷೆಯನ್ನು ಮತ್ತೆ ವ್ಯಕ್ತಪಡಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಇಂದಿನ ತ್ರಿಕಾಲ ಪ್ರಾರ್ಥನೆಯಲ್ಲಿ ಈ ಕುರಿತು ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಶಾಂತಿಯ ಕುರಿತ ತಮ್ಮ ಮನವಿಯನ್ನು ಮತ್ತೆ ಪುನರುಚ್ಛರಿಸಿದ್ದಾರೆ. ವ್ಯಾಟಿಕನ್ ನಗರದಲ್ಲಿ ನಾಳೆ ಸೋಮವಾರ ಮಕ್ಕಳ ಕುರಿತ ಸಭೆಯೊಂದನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಯುದ್ಧದಲ್ಲಿ ಹೆಚ್ಚು ನರಳುವುದು ಮಕ್ಕಳೇ! ಮಕ್ಕಳು ಮುಗ್ಧರು. ತಮ್ಮದಲ್ಲದ ತಪ್ಪಿಗೆ ಅವರು ಅನೇಕ ನೋವು-ಭಾದೆಗಳನ್ನು ಅನುಭವಿಸಬೇಕಿದೆ. ಇಂತಹ ಹಿಂಸೆಗಳಿಗೆ ಮಕ್ಕಳನ್ನು ಒಳಪಡಿಸುವುದು ಕ್ರೌರ್ಯ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಈ ವೇಳೆ ವಿಶೇಷವಾಗಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶವನ್ನು ನೆನಪಿಸಿಕೊಂಡಿದ್ದು, ಪ್ರಸ್ತುತ ಅಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಕುರಿತು ದನಿಯೆತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ ಹಿಂಸೆ ನಿಲ್ಲಲು ಸಂಬಂಧಪಟ್ಟ ಪಕ್ಷಗಳು ವಿಶೇಷವಾಗಿ ಅಂತರಾಷ್ಟ್ರೀಯ ಸಮುದಾಯವು ಶ್ರಮಿಸಬೇಕು, ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಮನವಿ ಮಾಡಿದ್ದಾರೆ.
ತ್ರಿಕಾಲ ಪ್ರಾರ್ಥನೆ - ಪ್ರಭುವಿನ ಸಮರ್ಪಣೆಯ ಹಬ್ಬ
ಪೋಪ್ ಫ್ರಾನ್ಸಿಸ್ ಅವರು ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ಪ್ರಭುವಿನ ಸಮರ್ಪಣೆಯ ಕುರಿತು ಮಾತನಾಡಿದ್ದಾರೆ. ಯೇಸುಕ್ರಿಸ್ತರು ಎಲ್ಲಾ ಜನರ ರಕ್ಷಣೆಯೂ ಹಾಗೂ ಬೆಳಕಾಗಿದ್ದಾರೆ ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು ನಾವೂ ದೇವರನ್ನು ಅರಿತುಕೊಂಡು, ವಿಶ್ವಾಸದಲ್ಲಿ ಬಾಳಬೇಕು ಎಂದು ಕರೆ ನೀಡಿದ್ದಾರೆ.
ನೆರೆದಿದ್ದ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಇಂದಿನ ದೇವಾಲಯದಲ್ಲಿ ಪ್ರಭು ಯೇಸುವನ್ನು ಕಾಣಿಕೆಯಾಗಿ ಸಮಸರ್ಪಿಸಿದ ಹಬ್ಬದ ಪ್ರಾಮುಖ್ಯತೆಯ ಕುರಿತು ಮಾತನಾಡಿದರು.
ಯೇಸುಬಾಲರನ್ನು ದೇವಾಲಯದಲ್ಲಿ ಕಾಣಿಕೆಯನ್ನಾಗಿ ಅರ್ಪಿಸುವಾಗ ಅಲ್ಲಿ ಸುಮಾರು ದಶಕಗಳಿಂದ ಕಾಯುತ್ತಿದ್ದ ಸಿಮೆಯೋನ ಹಾಗೂ ಪ್ರವಾದಿನಿ ಅನ್ನಳು ದೇವರ ಮಹಿಮೆಯನ್ನು ಕೊಂಡಾಡುತ್ತಾರೆ. ಸಿಮೆಯೋನನು ಕ್ರಿಸ್ತ ಕಂದನನ್ನು ಕಂಡು ನಾನು ಧನ್ಯನಾದೆ ಎಂದು ಹೇಳುತ್ತಾನೆ - ಇವೆಲ್ಲವುಗಳ ಅರ್ಥ ದೇವರು ನಮ್ಮ ನಡುವೆಯೇ ಇದ್ದಾರೆ ಎಂಬುದಾಗಿದೆ. ಪ್ರಭು ತಮ್ಮ ಜನತೆಯನ್ನು ಎಂದಿಗೂ ಕೈಬಿಡುವುದಿಲ್ಲ. ಅವರು ಸದಾ ನಮ್ಮನ್ನು ಮುನ್ನಡೆಸುತ್ತಾರೆ ಎಂದು ಪೋಪ್ ಫ್ರಾನ್ಸಿಸ್ ಅವರು ನೆರೆದಿದ್ದ ಜನತೆಯನ್ನು ಉದ್ದೇಶಿಸಿ ಹೇಳಿದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಕ್ರಿಸ್ತರೇ ಮನುಕುಲದ ರಕ್ಷೆ ಹಾಗೂ ಬೆಳಕಾಗಿದ್ದಾರೆ. ಈ ಬೆಳಕಿನ ಮಾರ್ಗದಲ್ಲಿಯೇ ನಾವೆಲ್ಲರೂ ನಡೆಯಬೇಕಿದೆ" ಎಂದು ಹೇಳಿದರು. ಅಂತಿಮವಾಗಿ ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಯನ್ನು ಕೋರಿದ ಅವರು "ಮಾತೆ ಮರಿಯಮ್ಮನವರು ನಮ್ಮ ಬದುಕಿನಲ್ಲಿ ನಮಗೆ ಸದಾ ಮಾರ್ಗದರ್ಶನವಾಗಿದ್ದು, ನಮ್ಮನ್ನು ಮುನ್ನಡೆಸಲಿ" ಎಂದು ಹೇಳಿದರು.