ಪೋಪ್ ಫ್ರಾನ್ಸಿಸ್: ಸಂಗೀತವು ಮನುಷ್ಯರಿಗೆ ಸಹಬಾಳ್ವೆಯನ್ನು ಕಲಿಸುತ್ತದೆ
ವರದಿ: ಕೀಲ್ಷೆ ಗುಸ್ಸೀ
ಇಟಲಿ ದೇಶದಲ್ಲಿ ಇದೀಗ ವಾರ್ಷಿಕ ಸಂಗೀತೋತ್ಸವ "ಸನ್ರೆಮೋ' ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಪೋಪ್ ಫ್ರಾನ್ಸಿಸ್ ಅವರು ವಿಡಿಯೋ ಸಂದೇಶವನ್ನು ನೀಡಿದ್ದಾರೆ. "ಮಕ್ಕಳನ್ನು ನಾಶಮಾಡುತ್ತಿರುವ" ಈ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಸಂಗೀತವು ಉಪಕರಣವಾಗಬೇಕು ಎಂದು ಹೇಳಿದ್ದಾರೆ.
ರೋಮ್ ನಗರದ ಆರ್ಟಿಸನ್ ಥಿಯೇಟರ್'ನಲ್ಲಿ ಕಾರ್ಯಕ್ರಮ ಆರಂಭವಾದ ಸಂದರ್ಭದಲ್ಲಿ ಈ ಕಾರ್ಯಕ್ರಮದ ನಿರೂಪಕ ಖ್ಯಾತ ಕಲಾವಿದ ಕಾರ್ಲೋ ಕೊಂತಿ ಅವರು ಆಶ್ಚರ್ಯಕರ ಅತಿಥಿಯೊಬ್ಬರು ಈಗ ವಿಡಿಯೋ ಸಂದೇಶವನ್ನು ಹಂಚಿಕೊಳ್ಳಲಿದ್ದಾರೆ" ಎಂದಾಗ ಎಲ್ಲರಿಗೂ ಆಶ್ಚರ್ಯವಾಯಿತು. ಆ ಆಶ್ಚರ್ಯಕರ ವ್ಯಕ್ತಿ ಪೋಪ್ ಫ್ರಾನ್ಸಿಸ್ ಆಗಿದ್ದರು. ಇದಕ್ಕೂ ಮುಂಚಿತವಾಗಿ ಎಲ್ಲಿಯೂ ಈ ಕಾರ್ಯಕ್ರಮದ ಕುರಿತು ಪೋಪ್ ಫ್ರಾನ್ಸಿಸ್ ಅವರು ಮಾತನಾಡುತ್ತಾರೆ ಎಂದು ಯಾರಿಗೂ ತಿಳಿದಿರಲಿಲ್ಲ.
ವಿಡಿಯೋ ಸಂದೇಶದಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಜಗತ್ತಿನ ಎಲ್ಲರೂ, ಒಂದಲ್ಲಾ ಒಂದು ರೀತಿಯಲ್ಲಿ ಮಾತನಾಡುವ ಭಾಷೆ ಸಂಗೀತವಾಗಿದೆ. ಸಂಗೀತವು ಜನತೆ ಸಹಬಾಳ್ವೆಯಿಂದ ಬದುಕಲು ಕಲಿಸುತ್ತದೆ" ಎಂದು ಹೇಳಿದರು.
ಈ ವೇಳೆ ಮಕ್ಕಳ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ನಿಮಗೆಲ್ಲರಿಗೂ ಈ ಜಗತ್ತಿನಲ್ಲಿ ಪ್ರಸ್ತುತ ಆಗುತ್ತಿರುವ ಯುದ್ಧ ಹಾಗೂ ಹಿಂಸೆಗಳ ಕುರಿತು ತಿಳಿದಿದೆ. ಈ ಯುದ್ಧ ಹಾಗೂ ಹಿಂಸೆಗಳು ಏನೂ ಅರಿಯದ ಮಕ್ಕಳನ್ನು ಬಲಿ ಪಡೆಯುತ್ತಿವೆ. ಮಕ್ಕಳ ಮಾರಣಹೋಮವು ಈ ಕೂಡಲೇ ನಿಲ್ಲಬೇಕು. ಈ ನಿಟ್ಟಿನಲ್ಲಿ ಕಲಾವಿದರುಗಳಾದ ನೀವು ಸಂಗೀತದ ಮೂಲಕ ಏನನ್ನಾದರೂ ಮಾಡಬೇಕು. ಮಕ್ಕಳ ವಿನಾಶವನ್ನು ತಪ್ಪಿಸಲು ಸಂಗೀತವು ಪ್ರಧಾನ ಪಾತ್ರವನ್ನು ವಹಿಸಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.