ಪೋಪ್ ಫ್ರಾನ್ಸಿಸ್: ಭರವಸೆಯಲ್ಲಿ ಒಂದಾಗಿ ಮುನ್ನಡೆಯಲು ತಪಸ್ಸುಕಾಲ ನೆರವಾಗುತ್ತದೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು 2025 ರ ತಪಸ್ಸುಕಾಲಕ್ಕೆ ಸಂದೇಶವನ್ನು ನೀಡಿದ್ದು, ಈ ಸಂದೇಶದಲ್ಲಿ ಭಕ್ತಾಧಿಗಳಿಗೆ ಭರವಸೆಯಿಂದ ನಡೆಯಲು ಕರೆ ನೀಡಿದ್ದಾರೆ. ನಾವು ನಿಜವಾಗಿಯೂ ದೇವರ ಕರೆಗೆ ಓಗೊಟ್ಟು, ಮನಪರಿವರ್ತನೆ ಹೊಂದಲು ಸಿದ್ಧರಾಗಿದ್ದೇವೆಯೇ ಎಂಬುದನ್ನು ಅರಿತುಕೊಳ್ಳಲು ಈ ತಪಸ್ಸುಕಾಲವು ನಮಗೆ ಇರುವ ಸದಾವಕಾಶವಾಗಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
"ನಾವು ಭರವಸೆಯಲ್ಲಿ ಪಯಣಿಸೋಣ - ಭರವಸೆಯ ಯಾತ್ರಿಕರು" ಎಂಬುದು ಈ ವರ್ಷದ ತಪಸ್ಸುಕಾಲ ಶೀರ್ಷಿಕೆಯಾಗಿದ್ದು, ಪೋಪ್ ಫ್ರಾನ್ಸಿಸ್ ಅವರು ಎಲ್ಲಾ ಕಥೋಲಿಕರಿಗೂ ಈ ತಪಸ್ಸುಕಾಲ ಎಂಬುದನ್ನು ಮನಪರಿವರ್ತನೆಗೆ ಇರುವ ಸದಾವಕಾಶ ಎಂದು ನೋಡಬೇಕು ಎಂದು ಕರೆ ನೀಡಿದ್ದಾರೆ. ಈ ತಪಸ್ಸುಕಾಲದಲ್ಲಿ ನಮ್ಮನ್ನು ನಾವೇ ಪರಾಮರ್ಶಿಸಿಕೊಳ್ಳಬೇಕು ಎಂದು ಹೇಳುವ ಪೋಪ್ ಫ್ರಾನ್ಸಿಸ್ "ನಿನ್ನೆಗಿಂತ ಇಂದು ನಾವು ಉತ್ತಮವಾಗಿದ್ದೇವೆಯೇ? ಹಾಗೇ ಇದ್ದೇವೆಯೇ? ಅಥವಾ ಅದಕ್ಕಿಂತ ಹಿಂದೆ ಹೋಗಿದ್ದೇವೆಯೇ ಎಂಬ ಕುರಿತು ನಾವು ನಮ್ಮನ್ನು ಚಿಂತನೆಗೆ ಒಳಪಡಿಸಬೇಕು" ಎಂದು ಹೇಳಿದ್ದಾರೆ.
ಸಿನೊಡಾಲಿಟಿ ಅಥವಾ ಪಯಣಿಸುವುದು ಎಂದರೆ ಒಂಟಿ ಪ್ರಯಾಣವಲ್ಲ. ದೇವರ ಮಕ್ಕಳಾಗಿ, ಧರ್ಮಸಭೆಯ ಪ್ರಜೆಗಳಾಗಿ ದೇವರ ವಾಗ್ದಾತ್ತನಾಡಿಗೆ ನಾವೆಲ್ಲರೂ ಒಂದಾಗಿ ಪಯಣಿಸಬೇಕಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳುತ್ತಾರೆ.
ಬೈಬಲ್‌ನಲ್ಲಿ ಉಲ್ಲೇಖಿಸಿರುವ ಇಸ್ರೇಲ್ ಜನರು ಈಜಿಪ್ಟ್‌ನಿಂದ ವಾಗ್ದತ್ತ ದೇಶಕ್ಕೆ ಮಾಡಿದ ನಿರ್ಗಮನವನ್ನು ನೆನಪಿಸಿಕೊಳ್ಳುತ್ತಾ, ಪೋಪ್ ನಮ್ಮ ಜೀವನವೂ ಒಂದು ಪ್ರಯಾಣ - ಅದು ದೇವರ ಕಡೆಗೆ ನಿರ್ದೇಶಿಸಲ್ಪಡಬೇಕು ಎಂದು ನಮಗೆ ನೆನಪಿಸುತ್ತಾರೆ.
ಈ ಪ್ರಯಾಣವು ಕೇವಲ ರೂಪಕವಲ್ಲ, ಬದಲಾಗಿ ಇದು ಪರಿವರ್ತನೆಗೆ ನಿರಂತರ ಕರೆಯನ್ನು ಒಳಗೊಂಡಿರುತ್ತದೆ, "ಪಾಪದ ಸಂದರ್ಭಗಳನ್ನು ಬಿಟ್ಟುಬಿಡುವುದು" ಮತ್ತು ನಮ್ಮ ಮಾನವ ಘನತೆಯನ್ನು ಕುಗ್ಗಿಸುವ ಸನ್ನಿವೇಶಗಳನ್ನು ಒಳಗೊಂಡಿದೆ.
ಅಂತಿಮವಾಗಿ ಅವಿಲಾದ ಸಂತ ತೆರೇಸಮ್ಮನವರ ಉದಾಹರಣೆಯನ್ನು ನೀಡುವ ಪೋಪ್ ಫ್ರಾನ್ಸಿಸ್ ಅವರು "ಅವರಂತೆ ನಾವೂ ಸಹ ದೇವರು ಸಫಲವಾದುದದನ್ನು ಸೂಕ್ತವಾದ ಸಮಯದಲ್ಲಿ ಮಾಡುತ್ತಾರೆ ಎಂಬ ಧೃಡ ನಂಬಿಕೆಯಿಂದ ಮುನ್ನಡೆಯಬೇಕು" ಎಂದು ಹೇಳಿದ್ದಾರೆ.