ಪೋಪ್ ಫ್ರಾನ್ಸಿಸ್ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಜೂಬಿಲಿ ಸಾರ್ವಜನಿಕ ಭೇಟಿ ಮುಂದೂಡಲಾಗಿದೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಬ್ರಾಂಚಿಟಿಸ್ ಚಿಕಿತ್ಸೆಗಾಗಿ ರೋಮ್ ನಗರದ ಅಗುಸ್ತೋ ಜೆಮೆಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಜ್ಯೂಬಿಲಿ ಸಾರ್ವಜನಿಕ ಭೇಟಿಯನ್ನು ಮುಂದೂಡಲಾಗಿದೆ.
ವ್ಯಾಟಿಕನ್ ಮಾಧ್ಯಮ ಕಚೇರಿಯ ಪ್ರಕಟಣೆಯ ಪ್ರಕಾರ "ಫೆಬ್ರವರಿ 15 ಕ್ಕೆ ನಿಗಧಿಯಾಗಿದ್ದ ಜ್ಯೂಬಿಲಿ ಸಾರ್ವಜನಿಕ ಭೇಟಿಯನ್ನು ಪೋಪ್ ಫ್ರಾನ್ಸಿಸ್ ಅವರು ಚಿಕಿತ್ಸೆಗೆಂದು ಆಸ್ಪತ್ರೆಗಾಗಿ ದಾಖಲಾಗಿರುವ ಕಾರಣ ಮುಂದೂಡಲಾಗಿದೆ" ಎಂದು ಹೇಳಿದೆ. ಸಂಸ್ಕೃತಿಯ ಜಗತ್ತು ಹಾಗೂ ಕಲಾವಿದರ ಜ್ಯೂಬಿಲಿ ಬಲಿಪೂಜೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಭಾಗವಹಿಸಬೇಕಿತ್ತು. ಆದರೆ ಪೋಪ್ ಫ್ರಾನ್ಸಿಸ್ ಅವರ ಬದಲಿಗೆ ಸಂಸ್ಕೃತಿ ಹಾಗೂ ಶಿಕ್ಷಣ ಪೀಠದ ಉಸ್ತುವಾರಿಯಾದ ಕಾರ್ಡಿನಲ್ ಹೊಸೆ ಟೊಲೆಂತಿನೋ ದೆ ಮೆಂಡೋನ್ಸಾ ಅವರು ಅರ್ಪಿಸಲಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಕಳೆದ ಕೆಲವು ದಿನಗಳಿಂದ ಬ್ರಾಂಚೆಟಿಸ್ ಲಕ್ಷಣಗಳನ್ನು ಹೊಂದುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಅವರು ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಹೇಳಿದೆ.
ಇಲ್ಲಿ ಪೋಪ್ ಫ್ರಾನ್ಸಿಸ್ ಅವರು ಬ್ರಾಂಚಿಟಿಸ್ ರೋಗಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳಲಿದ್ದಾರೆ ಹಾಗೂ ಈ ಹಿನ್ನೆಲೆಯಲ್ಲಿ ಹಲವು ಪರೀಕ್ಷೆಗಳಿಗೆ ಒಳಪಡಲಿದ್ದಾರೆ ಎಂದು ವರದಿಯಾಗಿದೆ. ಕಳೆದ ಹಲವು ದಿನಗಳಿಂದಲೂ ಸಹ ಪೋಪ್ ಫ್ರಾನ್ಸಿಸ್ ಅವರು ಇದರಿಂದ ಬಳಲುತ್ತಿದ್ದು, ಈ ಕುರಿತು ಹಲವು ಬಾರಿ ಹೇಳಿಕೊಂಡಿದ್ದರು.
ಕಳೆದ ಎರಡು ಸಾರ್ವಜನಿಕ ಭೇಟಿಯಲ್ಲಿ ಅವರು ತಮ್ಮ ಆಪ್ತರಿಗೆ ತಮ್ಮ ಸಂದೇಶವನ್ನು ಓದಲು ವಿನಂತಿಸಿಕೊಂಡಿದ್ದರು.
ಫೆಬ್ರವರಿ 6 ರಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಪೋಪ್ ಫ್ರಾನ್ಸಿಸ್ ಅವರು ಬ್ರಾಂಚಿಟಿಸ್' ನಿಂದ ಬಳಲುತ್ತಿದ್ದು, ಅವರು ವಿವಿಧ ವ್ಯಕ್ತಿಗಳು ಹಾಗೂ ಗುಂಪುಗಳನ್ನು ತಮ್ಮ ಅಧಿಕೃತ ನಿವಾಸ "ಕಾಸ ಸಾಂತ ಮಾರ್ತ" ದಲ್ಲಿ ಭೇಟಿಯಾಗಲಿದ್ದಾರೆ ಎಂದು ವರದಿ ಮಾಡಿತ್ತು.