ಪೋಪ್ ಫ್ರಾನ್ಸಿಸ್ ಅವರಿಗೆ ಪ್ರಾರ್ಥನೆ ಮತ್ತು ಶುಭಾಶಯಗಳ ಸುರಿಮಳೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಅನಾರೋಗ್ಯದಿಂದ ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಕಳೆದ ಒಂದು ವಾರಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ವಿಶ್ವದಾದ್ಯಂತ ಕೋಟ್ಯಾಂತರ ಭಕ್ತಾಧಿಗಳು ಪ್ರಾರ್ಥಿಸುತ್ತಿದ್ದಾರೆ. ಈ ನಡುವೆ ವಿವಿಧ ಪ್ರಮುಖ ವ್ಯಕ್ತಿಗಳು ಅವರು ಶೀಘ್ರ ಗುಣಮುಖರಾಗಲೆಂದು ಶುಭಾಶಯಗಳನ್ನು ತಿಳಿಸಿದ್ದಾರೆ.
ಕಾನ್ಸ್ಟಾಂಟಿನೋಪಲಿನ ಎಕ್ಯುಮೆನಿಕಲ್ ಪೇಟ್ರಿಯಾರ್ಕ್ ಮೊದಲನೇಯ ಬರ್ತಲೋಮ್ ಅವರು ಪೋಪ್ ಫ್ರಾನ್ಸಿಸ್ ಅವರಿಗೆ ಪತ್ರವನ್ನು ಬರೆದಿದ್ದು "ನನ್ನ ಪ್ರೀತಿಯ ಸಹೋದರ" ಎಂದು ಸಂಭೋದಿಸಿದ್ದಾರೆ. ತಮ್ಮ ಕೈ ಬರಹದಲ್ಲಿ ಬರೆದಿರುವ ಪತ್ರದಲ್ಲಿ ಪೇಟ್ರಿಯಾರ್ಕ್ ಅವರು "ನೀವು ಶೀಘ್ರ ಗುಣಮುಖರಾಗಬೇಕೆಂದು ನಾನು ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.
ಜೆರುಸಲೇಮಿನ ಪೇಟ್ರಿಯಾರ್ಕ್ ಕಾರ್ಡಿನಲ್ ಪಿಯರ್ಬತ್ತಿಸ್ತಾ ಪಿಝಾಬಲ್ಲ ಅವರು ಪೋಪ್ ಫ್ರಾನ್ಸಿಸ್ ಅವರಿಗೆ ಪತ್ರವನ್ನು ಬರೆದಿದ್ದು "ಆಧ್ಯಾತ್ಮಿಕ ಕುಟುಂಬವಾಗಿ ನಾವೆಲ್ಲರೂ ನಿಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇವೆ" ಎಂದು ಹೇಳಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರ ತವರು ಅರ್ಜೆಂಟಿನಾ ದೇಶದಿಂದಲೂ ಸಹ ಶುಭಾಶಯಗಳು ಹರಿದು ಬಂದಿದೆ. ಅರ್ಜೆಂಟೀನಾದ ಬ್ಯೂನಸ್ ಎರೀಸ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಜಾರ್ಜ್ ಇಗ್ನಾಸಿ ಅವರು ಪೋಪ್ ಫ್ರಾನ್ಸಿಸ್ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದು, ಶೀಘ್ರವೇ ಗುಣಮುಖರಾಗಿ ಬರುವಂತೆ ಆಶಿಸಿದ್ದಾರೆ.
ಅಮೇರಿಕಾ, ಕೆನಡಾ, ಸೇರಿದಂತೆ ವಿವಿಧ ದೇಶಗಳಿಂದ ಧರ್ಮಾಧ್ಯಕ್ಷರುಗಳು, ಕಾರ್ಡಿನಲ್ಲುಗಳು, ಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು ಹಾಗೂ ಅಂತರ್-ಧರ್ಮೀಯ ನಾಯಕರುಗಳು ಪೋಪ್ ಫ್ರಾನ್ಸಿಸ್ ಅವರು ಗುಣಮುಖರಾಗಿ ಬರುವಂತೆ ಹಾರೈಸಿದ್ದಾರೆ.