ಪೋಪ್ ಫ್ರಾನ್ಸಿಸ್: ಕ್ರಿಸ್ತರ ಸಂದೇಶವನ್ನು ಜಗತ್ತಿನಾದ್ಯಂತ ಸಾರಿರಿ
ವರದಿ: ವ್ಯಾಟಿಕನ್ ನ್ಯೂಸ್
ಉತ್ತರ ಇಟಲಿಯ ಥಿಯಾಲಜಿ ಫ್ಯಾಕಲ್ಟಿ ಆಫ್ ತ್ರೆವೆನಿತೋ ಸಂಸ್ಥೆಯ ಇಪ್ಪತ್ತನೇಯ ವಾರ್ಷಿಕೋತ್ಸವವನ್ನು ಪೋಪ್ ಫ್ರಾನ್ಸಿಸ್ ಅವರು ಆಚರಿಸಿದರು. ಈ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕ್ರಿಸ್ತರ ಸಂದೇಶವನ್ನು ಜಗತ್ತಿನಾದ್ಯಂತ ಸಾರಿರಿ ಎಂದು ಕಿವಿಮಾತನ್ನು ಪೋಪ್ ಫ್ರಾನ್ಸಿಸ್ ಹೇಳಿದರು.
ಥಿಯಾಲಜಿ ಫ್ಯಾಕಲ್ಟಿ ಆಫ್ ತ್ರೆವೆನಿತೋ ಸಂಸ್ಥೆಯ ಇಪ್ಪತ್ತನೇಯ ವಾರ್ಷಿಕೋತ್ಸವದ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರು ಕಳೆದ ತಿಂಗಳು ಪತ್ರದ ಮೂಲಕ ಸಂದೇಶವನ್ನು ಕಳುಹಿಸಿದ್ದರು. ಈ ಸಂಸ್ಥೆಯ ರೆಕ್ಟರ್ ಫಾದರ್ ಮೌರೀಝೊಯೋ ಜಿರೋಲಾಮಿ ಅವರಿಗೆ ಪೋಪ್ ಫ್ರಾನ್ಸಿಸ್ ಅವರು ತಾವು ಸಹಿ ಮಾಡಿದ ಪತ್ರವನ್ನು ಕಳುಹಿಸಿದ್ದರು.
ಪಾದುವಾದಲ್ಲಿ ಕೇಂದ್ರವನ್ನು ಹೊಂದಿರುವ ಟ್ರಿವೆನೆಟೊದ ದೈವಶಾಸ್ತ್ರ ವಿಭಾಗವು, ಉತ್ತರ ಇಟಾಲಿಯನ್ ಪ್ರದೇಶಗಳಾದ ವೆನೆಟೊ, ಫ್ರಿಯುಲಿ-ವೆನೆಜಿಯಾ ಗಿಯುಲಿಯಾ ಮತ್ತು ಟ್ರೆಂಟಿನೊ ಆಲ್ಟೊ-ಅಡಿಜ್‌ನಲ್ಲಿರುವ ಐದು ದೈವಶಾಸ್ತ್ರ ಸಂಸ್ಥೆಗಳು ಮತ್ತು ಏಳು ಉನ್ನತ ಧಾರ್ಮಿಕ ವಿಜ್ಞಾನ ಸಂಸ್ಥೆಗಳ ಜಾಲವನ್ನು ಸಂಪರ್ಕಿಸುತ್ತದೆ. ಇದನ್ನು 2005 ರಲ್ಲಿ ಸ್ಥಾಪಿಸಲಾಯಿತು, ಅಲ್ಲಿ ಹಲವಾರು ಸಂಸ್ಥೆಗಳು ಶ್ರೀಸಾಮಾನ್ಯ ಪುರುಷರು ಮತ್ತು ಮಹಿಳೆಯರು, ಗುರುಗಳು, ಗುರು ಅಭ್ಯರ್ಥಿಗಳು ಮತ್ತು ಧಾರ್ಮಿಕ ಸಹೋದರ-ಸಹೋದರಿಯರಿಗೆ ಶೈಕ್ಷಣಿಕ ದೈವಶಾಸ್ತ್ರದ ಕುರಿತು ತರಭೇತಿಯನ್ನು ನೀಡುತ್ತದೆ.
ಮುಂದುವರೆದು ಪತ್ರದಲ್ಲಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಇಪ್ಪತ್ತು ವರ್ಷಗಳಲ್ಲಿ ಆಗಿರುವ ಎಲ್ಲಾ ಒಳಿತಿಗಾಗಿ ನಾನು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಕಾರ್ಯದಲ್ಲಿ ನಿಮ್ಮೊಂದಿಗೆ ಜೊತೆಯಾಗುತ್ತೇನೆ" ಎಂದು ಹೇಳಿದ್ದಾರೆ.
ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಅವರು ಈ ಸಂಸ್ಥೆಯಲ್ಲಿ ವ್ಯಾಸಂಗವನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ "ಧೈರ್ಯದಿಂದ ಶುಭಸಂದೇಶವನ್ನು ಸಾರಿರಿ. ಎಲ್ಲಾ ಸವಾಲುಗಳನ್ನು ಪ್ರಭುವಿನ ಕೃಪೆಯಿಂದ ಎದುರಿಸುತ್ತಾ ಮುನ್ನುಗ್ಗಿರಿ" ಎಂದು ಹೇಳಿದರು.