ಬಲಿಪೂಜೆಯಲ್ಲಿ ಪೋಪ್: ದೇವರ ವಾಕ್ಯ ನಮಗೆ ಸಂತೋಷ ಮತ್ತು ಬೆಳಕನ್ನು ತರುತ್ತದೆ
ವರದಿ: ಡೆವಿನ್ ವಾಟ್ಕಿನ್ಸ್
ಇಂದು ಅಖಿಲ ಧರ್ಮಸಭೆ ದೇವರ ವಾಕ್ಯದ ಭಾನುವಾರವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್ ಅವರು ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು ದೇವರ ವಾಕ್ಯವು ನಮಗೆ ಸಂತೋಷವನ್ನು ಹಾಗೂ ಬೆಳಕನ್ನು ತರುತ್ತದೆ ಎಂದು ಹೇಳಿದ್ದಾರೆ. ದೇವರ ವಾಕ್ಯದ ಭಾನುವಾರವನ್ನು ಪೋಪ್ ಫ್ರಾನ್ಸಿಸ್ ಅವರು ಕೆಲವು ವರ್ಷಗಳ ಹಿಂದೆ ಆರಂಭಿಸಿದ್ದರು.
"ದೇವರ ಸಾಮ್ರಾಜ್ಯದೆಡೆಗೆ ನಾವು ಯಾತ್ರಿಕ ಪಯಣವನ್ನು ಆರಂಭಿಸಿರುವಾಗ ಶುಭಸಂದೇಶದ ವಾಕ್ಯ ಎಂಬುದು ನಮ್ಮ ಸಂತೋಷವಾಗಿದ್ದು, ಇದು ನಮಗೆ ದೇವರ ಸಾಮ್ರಾಜ್ಯದ ಪರಿಕಲ್ಪನೆಯಲ್ಲಿ ಹಾಗೂ ಐಕ್ಯತೆಯಲ್ಲಿ ನಡೆಯಲು ನೆರವಾಗುತ್ತದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಈ ವರ್ಷದ ದೇವರ ವಾಕ್ಯದ ಭಾನುವಾರದ ಶೀರ್ಷಿಕೆ "ನಾನು ನಿಮ್ಮ ವಾಕ್ಯದಲ್ಲಿ ಭರವಸೆಯನ್ನು ಇಡುತ್ತೇನೆ" ಎಂಬುದಾಗಿದೆ. ಈ ಹಿನ್ನೆಲೆಯಲ್ಲಿ ಬಲಿಪೂಜೆಯನ್ನು ಅರ್ಪಿಸಿದ ಪೋಪ್ ಫ್ರಾನ್ಸಿಸ್ ಅವರು 40 ಶ್ರೀಸಾಮಾನ್ಯರಿಗೆ ಲೆಕ್ಟರ್ "ವಾಚನ ಓದುಗ" ಸೇವೆಯ ಪದವಿಯನ್ನು ನೀಡಿದರು. ಈ 40 ಜನರು ವಿವಿಧ ದೇಶಗಳಿಂದ ಬಂದಿದ್ದರು ಎಂಬುದು ವಿಶೇಷ ಸಂಗತಿಯಾಗಿದೆ.
ತಮ್ಮ ಪ್ರಬೋಧನೆಯಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಯೇಸುಕ್ರಿಸ್ತರು ಜೀವಂತ ವಾಕ್ಯವಾಗಿದ್ದು, ಅವರಲ್ಲಿ ಎಲ್ಲಾ ವಾಕ್ಯಗಳು ಹಾಗು ಪ್ರವಾದನೆಗಳು ಸಂಪೂರ್ಣವಾಗುತ್ತದೆ" ಎಂದು ಹೇಳಿದರು. "ನಾವೂ ಸಹ ಅವರ ಮಾತಿಗೆ ನಮ್ಮ ಕಿವಿಗಳನ್ನು ಹಾಗೂ ಹೃದಯಗಳನ್ನು ತೆರೆಯುವ ಮೂಲಕ ಕಿವಿಗೊಡಬೇಕು" ಎಂದು ನುಡಿದರು.
"ಪ್ರಭು ಕ್ರಿಸ್ತರು ನಮ್ಮೆಲ್ಲರಿಗೂ ಬಡವರಿಗೆ ಶುಭ ಸಂದೇಶವನ್ನು ಸಾರುವಂತೆ ಹೇಳಿದ್ದಾರೆ. ಶುಭಸಂದೇಶ ಅಥವಾ ದೇವರ ವಾಕ್ಯ ಎಂದರೆ ಭರವಸೆ, ಬೆಳಕು ಹಾಗು ಪ್ರೀತಿಯಾಗಿದೆ. ಪ್ರಭುವಿನ ಸಹೋದರರಾಗಿರುವ ನಾವೂ ಸಹ ಇತರರಿಗೆ ಇದನ್ನೇ ಬಯಸಬೇಕು. ಆಗ ಮಾತ್ರ ನಾವು ಸಂತೋಷದ ಹಾಗೂ ಬೆಳಕಿನ ಶುಭಸಂದೇಶವನ್ನು ಎಲ್ಲರಿಗೂ ಸಾರಲು ಸಾಧ್ಯ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.