ನೂತನವಾಗಿ ದೀಕ್ಷಾಸ್ನಾನ ಪಡೆದ ಕುಟುಂಬಗಳಿಗೆ ಪೋಪ್: ಅದು ಅತ್ಯುನ್ನತ ವರದಾನವಾಗಿದೆ
ವರದಿ: ಕೀಲ್ಚೆ ಗುಸ್ಸೀ
ಪೋಪ್ ಫ್ರಾನ್ಸಿಸ್ ಅವರು ಇಂದು ಪ್ರಭುವಿನ ದೀಕ್ಷಾಸ್ನಾನದ ಮಹೋತ್ಸವದ ಹಿನ್ನೆಲೆ, ವ್ಯಾಟಿಕನ್ನಿನ ಸಿಸ್ಟೇನ್ ಚಾಪೆಲ್'ನಲ್ಲಿ 21 ಶಿಶುಗಳಿಗೆ ದೀಕ್ಷಾಸ್ನಾನವನ್ನು ನೀಡಿದ್ದಾರೆ. ಈ ವೇಳೆ ದೀಕ್ಷಾಸ್ನಾನವು ದೇವರ ಅತ್ಯುನ್ನತ ವರದಾನವಾಗಿದೆ ಎಂದು ಹೇಳಿದ್ದಾರೆ.
ಈ ವೇಳೆ ಬಲಿಪೂಜೆಯ ಆರಂಭದಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಮಕ್ಕಳು ಈಗ ಅತ್ತರೂ, ರಚ್ಚೆ ಹಿಡಿದರೂ, ಕೂಗಿದರೂ ಪರವಾಗಿಲ್ಲ. ಬೇಕಾದರೆ ಅವರಿಗೆ ತಿನ್ನಲು ಏನನ್ನಾದರೂ ಕೊಡಿ ಪರವಾಗಿಲ್ಲ. ಏಕೆಂದರೆ ಅವರಿಗೆ ಇಲ್ಲಿ ಇರಲು ತೊಂದರೆಯಾಗಬಾರದು" ಎಂದು ಹೇಳಿದರು.
"ಇಂದು ದೀಕ್ಷಾಸ್ನಾನವನ್ನು ಪಡೆಯಲು ಬಂದಿರುವ ಇಲ್ಲಿನ ಮಕ್ಕಳೇ ನಮಗೆ ಪ್ರಮುಖ ವ್ಯಕ್ತಿಗಳಾಗಿದ್ದಾರೆ. ದೀಕ್ಷಾಸ್ನಾನಕ್ಕಾಗಿ ನಾವು ಅವರಿಗಾಗಿ ಪ್ರಾರ್ಥಿಸುವ ಮೂಲಕ ಈಗ ನಾವು ಅವರ ಸೇವೆಯನ್ನು ಮಾಡಬೇಕಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. ಪೋಪ್ ಫ್ರಾನ್ಸಿಸ್ ಅವರು ದೀಕ್ಷಾಸ್ನಾನದ ಮಹತ್ವದ ಕುರಿತು ಮಕ್ಕಳ ಪೋಷಕರೂ ಹಾಗೂ ಅಜ್ಜಿ-ತಾತಂದಿರಿಗೆ ಹೇಳಿದರು. "ಬದುಕಿನಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಎದುರಾದಾಗ ನಾವು ಮೊಂಬತ್ತಿಯನ್ನು ಹಚ್ಚಿಸುತ್ತಾ, ಪ್ರಭುವಿನ ಕೃಪಾಶೀರ್ವಾದಗಳನ್ನು ಬೇಡಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
1981 ರಿಂದ ವಿಶ್ವಗುರುಗಳು ಮಕ್ಕಳಿಗೆ ದೀಕ್ಷಾಸ್ನಾನ ನೀಡುವ ಸಂಪ್ರದಾಯವಿದೆ. ಮೊದಲು ಇದು ವ್ಯಾಟಿಕನ್ನಿನ ಸ್ವಿಸ್ ಗಾರ್ಡ್'ಗಳ ಮಕ್ಕಳಿಗಾಗಿ ಮಾತ್ರ ಮೀಸಲಿತ್ತು. ಕ್ರಮೇಣ ಇದು ಸಾರ್ವಜನಿಕವಾಯಿತು. ಪೋಪ್ ಸಂತ ದ್ವಿತೀಯ ಜಾನ್ ಪೌಲರು ಮಕ್ಕಳ ದೀಕ್ಷಾಸ್ನಾನವನ್ನು ವ್ಯಾಟಿಕನ್ನಿನ ಸಂತ ಪೌಲರ ಪ್ರಾರ್ಥನಾಲಯದಲ್ಲಿ ನೀಡುತ್ತಿದ್ದರು. ಕ್ರಮೇಣ ಇದು ಸಿಸ್ಟೇನ್ ಚಾಪೆಲ್'ಗೆ ವರ್ಗಾವಣೆಯಾಯಿತು.