ಕಾಸಿಕ ಭೇಟಿಯನ್ನು ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಗೆ ಅರ್ಪಿಸಿದ ಪೋಪ್ ಫ್ರಾನ್ಸಿಸ್
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಡಿಸೆಂಬರ್ 15 ರಂದು ಫ್ರಾನ್ಸ್ ದೇಶದ ಕರಾವಳಿ ತೀರದಲ್ಲಿರುವ ಕಾಸಿಕಾ ದ್ವೀಪಕ್ಕೆ ಪ್ರೇಷಿತ ಭೇಟಿಯನ್ನು ನೀಡಲಿದ್ದಾರೆ. ಇದಕ್ಕೂ ಮುಂಚಿತವಾಗಿ ಅವರು ಸಂಪ್ರದಾಯದಂತೆ ಪ್ರೇಷಿತ ಭೇಟಿಯನ್ನು ಆರಂಭಿಸುವ ಮುನ್ನ ರೋಮ್ ನಗರದ ಸಂತ ಮೇರಿ ಮೇಜರ್ ಮಹಾದೇವಾಲಯಕ್ಕೆ ಭೇಟಿ ನೀಡಿ, ತಮ್ಮ ಭೇಟಿಯನ್ನು ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಗೆ ಅರ್ಪಿಸಿದ್ದಾರೆ. ಇದು ಪೋಪ್ ಫ್ರಾನ್ಸಿಸ್ ಅವರ 47ನೇ ಪ್ರೇಷಿತ ಪ್ರಯಾಣವಾಗಿದೆ.
ಕಾರ್ ಮೂಲಕ ರೋಮ್ ನಗರದ ಸಂತ ಮೇರಿ ಮೇಜರ್ ಮಹಾದೇವಾಲಯಕ್ಕೆ ಪೋಪ್ ಫ್ರಾನ್ಸಿಸ್ ತೆರಳಿದ್ದಾರೆ ಎಂದು ಪವಿತ್ರ ಪೀಠದ ಮಾಧ್ಯಮ ಪ್ರಕಟಣೆಯು ತಿಳಿಸಿದೆ. ಪೋಪ್ ಫ್ರಾನ್ಸಿಸ್ ಅವರು ಇಲ್ಲಿಗೆ ತೆರಳಿದ ತಕ್ಷಣ ಅಲ್ಲಿನ ಗ್ರೆಗೋರಿಯನ್ ಪ್ರಾರ್ಥನಾಲಯದಲ್ಲಿ ಪ್ರಾರ್ಥಿಸಿ, ತಮ್ಮ ಪ್ರೇಷಿತ ಭೇಟಿಯನ್ನು ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಗೆ ಅರ್ಪಿಸಿದ್ದಾರೆ.
ಇದೇ ವೇಳೆ ಅವರು ಈ ಮಹಾದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಿರುವ ಎಲ್ಲರಿಗಾಗಿ ಪ್ರಾರ್ಥಿಸಿದರು. ಅಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಸಂತೋಷದ ಸಂದರ್ಭವಾದ ಕ್ರಿಸ್ಮಸ್ ಸಮಯದಲ್ಲಿ ನಾನು ನಿಮಗೆ ಶುಭ ಹಾರೈಸುತ್ತೇನೆ. ಏಕೆಂದರೆ ಕ್ರಿಸ್ಮಸ್ ಸಂತೋಷದ ಹಬ್ಬವಾಗಿದೆ" ಎಂದು ಹೇಳಿದ್ದಾರೆ. "ಕ್ರಿಸ್ಮಸ್ ಹಬ್ಬವು ಮಾತೆಯ ಕಾಳಜಿಯನ್ನು ನಮಗೆ ತರುತ್ತದೆ. ಕ್ರಿಸ್ತ ಕಂದನನ್ನು ಪೊರೆದ ಮಾತೆ ಮರಿಯಮ್ಮನವರು ನಮ್ಮನ್ನೂ ಸಹ ಪೊರೆಯುತ್ತಾರೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಭಾನುವಾರ ಬೆಳಿಗ್ಗೆ ಸುಮಾರು 7:45 ಕ್ಕೆ ಪೋಪ್ ಫ್ರಾನ್ಸಿಸ್ ಅವರು ಪೋಪರ ವಿಮಾನದ ಮೂಲಕ ಕಾಸಿಕಾ ದ್ವೀಪಕ್ಕೆ ಪ್ರೇಷಿತ ಪ್ರಯಾಣವನ್ನು ಆರಂಭಿಸಲಿದ್ದಾರೆ. ಬೆಳಿಗ್ಗೆ ಸುಮಾರು 9 ಗಂಟೆಗೆ ಅವರು ಈ ದ್ವೀಪದಲ್ಲಿ ಬಂದು ಸೇರುತ್ತಾರೆ ಎಂದು ವರದಿಯಾಗಿದೆ. ಭಾನುವಾರ ಮಧ್ಯಾಹ್ನ ಪೋಪ್ ಫ್ರಾನ್ಸಿಸ್ ಅವರು ಇಲ್ಲಿ ಬಲಿಪೂಜೆಯನ್ನು ಅರ್ಪಿಸಿ, ತದ ನಂತರ ಅಜಾಕ್ಸಿಯೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫ್ರಾನ್ಸ್ ದೇಶದ ಅಧ್ಯಕ್ಷ ಇಮ್ಯಾನುವೇಲ್ ಮ್ಯಾಕ್ರನ್ ಅವರನ್ನು ಭೇಟಿ ಮಾಡಿಲಿದ್ದಾರೆ.
ಸಂಜೆ 7 ಗಂಟೆಗೆ ಪೋಪರ ವಿಮಾನವು ರೋಮ್ ನಗರಕ್ಕೆ ಹಿಂತಿರುಗಲಿದೆ.