ಗಾಜಾದಲ್ಲಿ ಧರ್ಮಗುರು ರೊಮೆನೆಲ್ಲಿ: ‘ವಿಶ್ವಗುರುವಿನ ಜೊತೆ ಮಾತನಾಡುವುದು ಒಂದು ಆಶೀರ್ವಾದವಾಗಿತ್ತು’
ವ್ಯಾಟಿಕನ್ ಸುದ್ದಿ
ಗಾಜಾ ನಗರದ ನಿವಾಸಿಗಳಿಗೆ ಇಸ್ರಯೇಲ್ ಆದೇಶ ನೀಡಿದ ನಂತರ, ಗಾಜಾದಲ್ಲಿರುವ ಪವಿತ್ರ ಕುಟುಂಬದ ದೇವಾಲಯದ ಧರ್ಮಕೇಂದ್ರದ ಧರ್ಮಗುರು ಗೇಬ್ರಿಯಲ್ ರೊಮೆನೆಲ್ಲಿರವರು ವೀಡಿಯೊ ಸಂದೇಶದಲ್ಲಿ ವಿಶ್ವಗುರು XIV ಲಿಯೋರವರಿಂದ ಕರೆ ಬಂದ ಸಂತೋಷವನ್ನು ಹಂಚಿಕೊಂಡರು.
ಪರಿಸ್ಥಿತಿ ಕಷ್ಟಕರವಾಗಿದ್ದರೂ ಸಹ, ನಾವು ಚೆನ್ನಾಗಿದ್ದೇವೆ ಎಂದು ನಾವು ಅವರಿಗೆ ಹೇಳಿದೆವು ಎಂದು ಅರ್ಜೆಂಟೀನಾದ ಧರ್ಮಗುರು ಹೇಳಿದರು. ವಿಶ್ವಗುರು ನಮಗೆ ತಮ್ಮ ಆಶೀರ್ವಾದ ನೀಡಿದರು ಮತ್ತು ನಮಗಾಗಿ ಮತ್ತು ಶಾಂತಿಗಾಗಿ ಪ್ರಾರ್ಥಿಸಿದರು. ಅವರು ಎಲ್ಲವನ್ನೂ ನಿಕಟವಾಗಿ ಅನುಸರಿಸುತ್ತಾರೆ ಮತ್ತು ಯುದ್ಧವನ್ನು ಕೊನೆಗೊಳಿಸಲು ಬದ್ಧರಾಗಿದ್ದಾರೆ.
ಗಾಜಾದ ಪವಿತ್ರ ಕುಟುಂಬದ ದೇವಾಲಯದ ಧರ್ಮಕೇಂದ್ರದ ವೃದ್ಧರು, ರೋಗಿಗಳು ಮತ್ತು ಮಕ್ಕಳು ಸೇರಿದಂತೆ ಸುಮಾರು 450 ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡುವುದನ್ನು ಮುಂದುವರೆಸಿದೆ. ಜನಸಂಖ್ಯೆಯಲ್ಲಿ ಹೆಚ್ಚಿನವರು ಹೊರಹೋಗಲು ಬಯಸುವುದಿಲ್ಲ ಎಂದು ಧರ್ಮಗುರು ರೊಮೆನೆಲ್ಲಿರವರು ವಿವರಿಸಿದರು. ಎಲ್ಲೆಡೆ ಅಪಾಯವಿದೆ, ಆದರೆ ಅನೇಕರು ನಗರದಲ್ಲಿಯೇ ಇರಲು ಬಯಸುತ್ತಾರೆ. ನಾವು ಅವರೊಂದಿಗೆ ಹೋಗಲು ಮತ್ತು ನಮಗೆ ಸಾಧ್ಯವಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತೇವೆ.
ಸಂಕಷ್ಟಗಳ ನಡುವೆಯೂ, ಧರ್ಮಕೇಂದ್ರದಲ್ಲಿ ಇತ್ತೀಚೆಗೆ ಒಂದು ಮದುವೆಯನ್ನು ಆಚರಿಸಿತು ಮತ್ತು ಮಾರ್ಕೋಸ್ ಎಂಬ ಗಂಡು ಮಗುವಿನ ಜನನವನ್ನು ಸ್ವಾಗತಿಸಿತು. ತುಂಬಾ ನೋವಿನ ಮಧ್ಯೆ, ದೇವರು ನಮಗೆ ಜೀವನ ಮತ್ತು ಸಂತೋಷದ ಸಂಕೇತಗಳನ್ನು ನೀಡುತ್ತಾರೆ ಎಂದು ಧರ್ಮಗುರು ಹೇಳಿದರು.
ನಾವು ಇಡೀ ಗಾಜಾ, ಮಧ್ಯಪ್ರಾಚ್ಯ ಮತ್ತು ಪ್ರಪಂಚಕ್ಕಾಗಿ ಶಾಂತಿಗಾಗಿ ಪ್ರಾರ್ಥಿಸುವುದನ್ನು ಮುಂದುವರಿಸುತ್ತೇವೆ. ಪೂಜ್ಯ ಕನ್ಯಾ ಮಾತೆಮೇರಿಯ ಮಧ್ಯಸ್ಥಿಕೆಯ ಮೂಲಕ ದೇವರು ನಮಗೆ ಶಾಂತಿಯ ಪವಾಡವನ್ನು ನೀಡಲೆಂದು ಪ್ರಾರ್ಥನೆ ಮಾಡಲು ಧರ್ಮಗುರು ರೊಮೆನೆಲ್ಲಿರವರು ಮನವಿ ಮಾಡಿ ಮುಕ್ತಾಯಗೊಳಿಸಿದರು.