MAP

 Gesù in Croce Gesù in Croce 

ಪ್ರಭುವಿನ ದಿನದ ಧ್ಯಾನ: ದುಃಖ ಮತ್ತು ಪ್ರೀತಿ ಸಂಧಿಸುವ ಸ್ಥಳ

ತಾಯಿ ಧರ್ಮಸಭೆಯು ಪವಿತ್ರ ಶಿಲುಬೆಯ ವಿಜಯೋತ್ಸವದ ಹಬ್ಬವನ್ನು ಆಚರಿಸುತ್ತಿರುವಾಗ, ಜೆನ್ನಿ ಕ್ರಾಸ್ಕಾರವರು "ದುಃಖ ಮತ್ತು ಪ್ರೀತಿ ಸಂಧಿಸುವ ಸ್ಥಳ" ಎಂಬ ವಿಷಯದ ಬಗ್ಗೆ ಧ್ಯಾನಿಸುತ್ತಾರೆ.

ಜೆನ್ನಿ ಕ್ರಾಸ್ಕಾ

ಪ್ರತಿ ವರ್ಷ ಸೆಪ್ಟೆಂಬರ್ 14 ರಂದು, ತಾಯಿ ಧರ್ಮಸಭೆಯು ಪವಿತ್ರ ಶಿಲುಬೆಯ ವಿಜಯೋತ್ಸವದ ಹಬ್ಬವನ್ನು ಆಚರಿಸುತ್ತದೆ. ಈ ದಿನದಲ್ಲಿ ಕ್ರೈಸ್ತರು ಕ್ರಿಸ್ತರ ಮರಣದ ಸಾಧನವನ್ನು ಮೇಲಕ್ಕೆತ್ತಲು ಆಹ್ವಾನಿಸಲ್ಪಡುತ್ತಾರೆ. ಇದು ಒಂದು ವಿಚಿತ್ರ ಮತ್ತು ಗಮನಾರ್ಹವಾದ ವಿರೋಧಾಭಾಸವಾಗಿದೆ: ಒಂದು ಕಾಲದಲ್ಲಿ, ಅವಮಾನ ಮತ್ತು ಕ್ರೌರ್ಯದ ಸಂಕೇತವಾಗಿದ್ದ ಶಿಲುಬೆಯನ್ನು ನಾವು ಉನ್ನತೀಕರಿಸುತ್ತೇವೆ.

ಈ ಸಮಯದಲ್ಲಿ ಆ ವಿರೋಧಾಭಾಸವನ್ನು ಅಳವಡಿಸಿಕೊಳ್ಳುವುದು ವಿಶೇಷವಾಗಿ ಕಷ್ಟಕರವೆನಿಸುತ್ತದೆ. ಕಳೆದ ಕೆಲವು ವಾರಗಳಲ್ಲಿ ಮಿನ್ನಿಯಾಪೋಲಿಸ್‌ನಲ್ಲಿ ಪ್ರಾರ್ಥನೆಯ ಸಮಯದಲ್ಲಿ ಕಥೋಲಿಕ ಶಾಲಾ ಮಕ್ಕಳ ಮೇಲೆ ನಡೆದ ದುರಂತ ಸಾಮೂಹಿಕ ಗುಂಡಿನ ದಾಳಿಯಿಂದ ನಾವು ಬೆಚ್ಚಿಬಿದ್ದಿದ್ದೇವೆ. ನಾವು ಮತ್ತೊಮ್ಮೆ 9/11ರ ವಾರ್ಷಿಕೋತ್ಸವವನ್ನು ಆಚರಿಸಿದ್ದೇವೆ. ಆ ದಿನದ ಭಯೋತ್ಪಾದನೆ ಮತ್ತು ದುಃಖವನ್ನು ನೆನಪಿಸಿಕೊಳ್ಳುತ್ತೇವೆ. ಚಾರ್ಲಿ ಕಿರ್ಕ್ ಅವರ ಆಘಾತಕಾರಿ ಹತ್ಯೆಯನ್ನು ನಾವು ನೋಡಿದ್ದೇವೆ. ನಮ್ಮ ಗಡಿಗಳನ್ನು ಮೀರಿ, ಜಗತ್ತು ಯುದ್ಧದ ಅಂತ್ಯವಿಲ್ಲದ ಭೀಕರತೆಯಿಂದ ಇನ್ನೂ ಗಾಯಗೊಂಡಿದೆ. ಇಡೀ ನಗರಗಳು ಶಿಥಿಲಗೊಂಡಿವೆ, ಕುಟುಂಬಗಳು ಛಿದ್ರವಾಗಿವೆ ಮತ್ತು ಅಂತ್ಯವಿಲ್ಲದ ರೀತಿಯಲ್ಲಿ ಲೆಕ್ಕವಿಲ್ಲದಷ್ಟು ಜೀವಗಳು ಕಳೆದುಹೋಗಿವೆ. ಈ ಘಟನೆಗಳು ಅನೇಕ ಹೃದಯಗಳನ್ನು ದುಃಖ, ಭಯ ಮತ್ತು ಕೋಪದ ಭಾರದಿಂದ ನಲುಗಿ ಹೋಗುವಂತೆ ಮಾಡುತ್ತವೆ.

ಈ ಹಿನ್ನೆಲೆಯಲ್ಲಿ, ಶಿಲುಬೆಯ ವಿಜಯವನ್ನು ಆಚರಿಸುವುದು ಅಸಾಧ್ಯವೆಂದು ತೋರುತ್ತದೆ. ಏಕೆಂದರೆ, ಅನೇಕ ಜನರು ತಮ್ಮ ಸ್ವಂತ ಶಿಲುಬೆಗಳಿಗೆ ನೈಜ ಸಮಯದಲ್ಲಿ ಮೊಳೆ ಹೊಡೆಯಲ್ಪಡುತ್ತಿರುವಾಗ ನಾವು ಶಿಲುಬೆಯಲ್ಲಿ ಹೇಗೆ ಸಂತೋಷಪಡಬಹುದು? ಇಷ್ಟೊಂದು ದುಃಖವಿರುವಾಗ ನಾವು ಹೇಗೆ ವೈಭವದ ಬಗ್ಗೆ ಮಾತನಾಡಬಹುದು?

ಆದರೂ, ಇದು ಕ್ರೈಸ್ತ ರಹಸ್ಯದ ಮೂಲತತ್ವವಾಗಿದೆ. ಈ ವಾರದ ಶುಭಸಂದೇಶಕಾರರಾದ ಸಂತ ಯೋವನ್ನರ ಸುವಾರ್ತೆಯಲ್ಲಿ ಪ್ರಭುಯೇಸು ನಮಗೆ ಹೇಳುವುದೇನೆಂದರೆ, ಮೋಶೆಯು ಮರುಭೂಮಿಯಲ್ಲಿ ಜನರನ್ನು ಗುಣಪಡಿಸಲು ಕಂಚಿನ ಸರ್ಪವನ್ನು ಎತ್ತಿದಂತೆಯೇ, ಮನುಷ್ಯಕುಮಾರನನ್ನು ಶಿಲುಬೆಯ ಮೇಲೆ ಎತ್ತುವ ಮೂಲಕ ಶಾಶ್ವತ ಜೀವನವನ್ನುನೀಡುತ್ತಾರೆ. ಅವರು ದುಃಖವನ್ನು ತಪ್ಪಿಸುವುದಿಲ್ಲ ಅಥವಾ ಅದನ್ನು ವಿವರಿಸುವುದಿಲ್ಲ. ಬದಲಾಗಿ, ಅವರು ಅದರೊಳಗೆ ಸಂಪೂರ್ಣವಾಗಿ ಪ್ರವೇಶಿಸುತ್ತಾರೆ. ಲೋಕದ ದ್ವೇಷ, ಹಿಂಸೆ ಮತ್ತು ಪಾಪವು ತಮಗೆ ಕೆಟ್ಟದ್ದನ್ನು ಮಾಡಲು ಆತನು ಬಿಡುತ್ತಾನೆ ಮತ್ತು ಆ ಸೋಲಿನ ಕ್ಷಣದಲ್ಲಿ, ಆತನು ಶಿಲುಬೆಯನ್ನು ಲೋಕವು ಇದುವರೆಗೆ ತಿಳಿದಿರುವ ಪ್ರೀತಿಯ ಒಂದು ಶ್ರೇಷ್ಠ ಸಂಕೇತವಾಗಿ ಪರಿವರ್ತಿಸುತ್ತಾನೆ.

ಇದು ನಮ್ಮ ನೋವನ್ನು ಮಾಯಗೊಳಿಸುವುದಿಲ್ಲ. ಆದರೆ ಇದು ನಮ್ಮ ನೋವಿಗೆ ಅರ್ಥವನ್ನು ನೀಡುತ್ತದೆ. ಇಲ್ಲಿಯೂ ಸಹ - ದಿವ್ಯಬಲಿಪೂಜೆಯಲ್ಲಿ ಕೊಲೆಯಾದ ಮಕ್ಕಳ ಮುಖದಲ್ಲೂ, 9/11 ರ ದೀರ್ಘ ನೆರಳಿನಲ್ಲಿಯೂ, ರಾಜಕೀಯ ಹಿಂಸಾಚಾರದ ಆಘಾತದಲ್ಲೂ, ಯುದ್ಧದ ವಿನಾಶದ ನಡುವೆಯೂ ಸಹ - ದೇವರು ನಮ್ಮನ್ನು ಕೈಬಿಟ್ಟಿಲ್ಲ ಎಂದು ಅದು ನಮಗೆ ಹೇಳುತ್ತದೆ. ದುಃಖದಲ್ಲಿ ಆತನು ನಮ್ಮೊಂದಿಗಿದ್ದಾನೆ.

ಶಿಲುಬೆ ಕಥೆಯ ಅಂತ್ಯವಲ್ಲ. ಯಾತನೆಯಿಂದ ಮೇಲಕ್ಕೆತ್ತಲ್ಪಟ್ಟವನು ಈಗ ಮಹಿಮೆಯಲ್ಲಿ ಆಳುತ್ತಿದ್ದಾನೆ. ಇದರಿಂದಾಗಿ, ಪ್ರೀತಿ ದ್ವೇಷಕ್ಕಿಂತ ಬಲಶಾಲಿಯಾಗಿದೆ, ಜೀವನವು ಮರಣಕ್ಕಿಂತ ಬಲಶಾಲಿಯಾಗಿದೆ ಮತ್ತು ಕತ್ತಲೆಯಾದ ಸ್ಥಳಗಳಲ್ಲಿಯೂ ಬೆಳಕು ಹೊಳೆಯುತ್ತದೆ ಎಂದು ನಾವು ವಿಶ್ವಾಸಿಸಲು ಧೈರ್ಯ ಮಾಡುತ್ತೇವೆ.

ಶಿಲುಬೆಯಲ್ಲಿ ನಮ್ಮ ಭರವಸೆ ಶಿಲುಬೆಯ ಭಾರಕ್ಕಿಂತ ಹೆಚ್ಚಾಗಿರಬೇಕು. ಅದು ಸುಲಭದ ಭರವಸೆಯಲ್ಲ. ಅದು ವಿಶ್ವದ ಗಾಯಗಳನ್ನು ನೇರವಾಗಿ ನೋಡುವ ಮತ್ತು ಪ್ರಭುವಿನ ಪುನರುತ್ಥಾನದಲ್ಲಿ ವಿಶ್ವಾಸವಿಡುವ ಭರವಸೆಯಾಗಿದೆ. ಈ ವಾರ ನಾವು ಶಿಲುಬೆಯನ್ನು ನೋಡುವಾಗ, ನಾವು ಹೊತ್ತಿರುವ ಎಲ್ಲಾ ದುಃಖವನ್ನು ಅದರ ಪಾದದಲ್ಲಿ ಇರಿಸಿ, ಸಾವಿನಿಂದ ಜೀವ ತಂದ ದೇವರು ನಮಗೆ ಮರುಜೀವ ನೀಡುತ್ತಾರೆ ಎಂದು ನಾವು ವಿಶ್ವಾಸಿಸಲು ಧೈರ್ಯ ಮಾಡೋಣ.
 

13 ಸೆಪ್ಟೆಂಬರ್ 2025, 18:51