ಕಾರ್ಡಿನಲ್ ಜುಪ್ಪಿ ಮತ್ತು ಯೆಹೂದ್ಯ ಸಮುದಾಯದ ಅಧ್ಯಕ್ಷರು ಗಾಜಾದಲ್ಲಿ ಯುದ್ಧದ ವಿರುದ್ಧ ಜಂಟಿ ಘೋಷಣೆಗೆ ಸಹಿ ಹಾಕಿದರು
ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
"ಅಮಾಯಕರ ಹತ್ಯಾಕಾಂಡವನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ."
ಬೊಲೊಗ್ನಾದ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಮ್ಯಾಟಿಯೊ ಮಾರಿಯಾ ಜುಪ್ಪಿರವರು ಮತ್ತು ಬೊಲೊಗ್ನಾದ ಯೆಹೂದ್ಯ ಸಮುದಾಯದ ಅಧ್ಯಕ್ಷ ಡೇನಿಯಲ್ ಡಿ ಪಾಜ್ ರವರು ಯುದ್ಧದ ವಿರುದ್ಧ ಸಹಿ ಹಾಕಿದ ಜಂಟಿ ಹೇಳಿಕೆಯಲ್ಲಿ ಈ ಪ್ರಬಲ ಜ್ಞಾಪನೆಯನ್ನು ನೀಡಿದ್ದಾರೆ ಎಂದು ಇಟಾಲಿಯದ ಸುದ್ದಿ ಸಂಸ್ಥೆಯ ಎಸ್‌ಐಆರ್ ಮಂಗಳವಾರ ತಿಳಿಸಿದೆ.
ಮಿಲಿಟರಿ ಕಾರ್ಯಾಚರಣೆಗಳು ನಿಲ್ಲಲಿ
ಶಸ್ತ್ರಾಸ್ತ್ರಗಳು ಮೌನವಾಗಲಿ, ಗಾಜಾದಲ್ಲಿನ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಇಸ್ರಯೇಲ್ ಕಡೆಗೆ ಕ್ಷಿಪಣಿ ಉಡಾವಣೆಗಳು ನಿಲ್ಲಲಿ ಎಂದು ಕಾರ್ಡಿನಲ್ ಮತ್ತು ಯೆಹೂದ್ಯ ಸಮುದಾಯದ ಅಧ್ಯಕ್ಷರು ಬರೆದಿದ್ದಾರೆ.
ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಶವಗಳನ್ನು ಹಿಂತಿರುಗಿಸಲಿ. ಹಸಿದವರಿಗೆ ಆಹಾರ ಸಿಗಲಿ ಮತ್ತು ಗಾಯಾಳುಗಳಿಗೆ ವೈದ್ಯಕೀಯ ಆರೈಕೆ ಖಚಿತವಾಗಲಿ. ಮಾನವೀಯ ಕಾರಿಡಾರ್‌ಗಳಿಗೆ ಅವಕಾಶ ನೀಡಲಿ ಎಂದು ಅವರು ಮನವಿ ಮಾಡಿದರು.
ರಕ್ಷಣೆಯಿಲ್ಲದ ನಾಗರಿಕರನ್ನು ಗುರಿಯಾಗಿಸಿಕೊಂಡ ಕೃತ್ಯಗಳ ಖಂಡನೆ
ಕಾರ್ಡಿನಲ್ ಜುಪ್ಪಿ ಮತ್ತು ಡಿ ಪಾಜ್ ರವರು ರಕ್ಷಣಯಿಲ್ಲದ ನಾಗರಿಕರನ್ನು ಗುರಿಯಾಗಿಸಿಕೊಂಡ ಪ್ರತಿಯೊಂದು ಭಯೋತ್ಪಾದಕ ಕೃತ್ಯವನ್ನು ಖಂಡಿಸಿದರು ಮತ್ತು ಯಾವುದೇ ಕಾರಣಕ್ಕೂ ಅಮಾಯಕರ ಹತ್ಯಾಕಾಂಡವನ್ನು ಸಮರ್ಥಿಸಲು ಸಾಧ್ಯವಿಲ್ಲ,ಹಲವಾರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಪುನರುಚ್ಚರಿಸಿದರು.
ಇಸ್ರಯೇಲ್ ಜನರಿಗೆ ಭದ್ರತೆಯಂತೆ ಪ್ಯಾಲಸ್ತೀನಿಯದ ಜನರಿಗೆ ನ್ಯಾಯವು ಪರಸ್ಪರ ಗುರುತಿಸುವಿಕೆ, ಮೂಲಭೂತ ಹಕ್ಕುಗಳಿಗೆ ಗೌರವ ಮತ್ತು ಪರಸ್ಪರ ಮಾತನಾಡುವ ಇಚ್ಛೆಯ ಮೂಲಕ ಮಾತ್ರ ಸಿಗುತ್ತದೆ ಎಂದು ಅವರು ಸೂಚಿಸಿದರು.
ಯೆಹೂದ್ಯ ವಿರೋಧಿ, ಇಸ್ಲಾಮೋಫೋಬಿಯಾ ಮತ್ತು ಕ್ರಿಶ್ಚಿಯನ್ಫೋಬಿಯಾವನ್ನು ತಿರಸ್ಕರಿಸುವುದು
ಜಂಟಿ ಘೋಷಣೆಯಲ್ಲಿ, ಅವರು ಒಟ್ಟಾಗಿ, ಇನ್ನು ಮುಂದೆ ಯುದ್ಧ ಬೇಡ: ಹಿಂಸೆಯ ಭಯಾನಕತೆಯನ್ನು ಬಯಸದ ಮತ್ತು ಅದಕ್ಕೆ ಒಗ್ಗಿಕೊಳ್ಳಬಾರದ ಗಾಯಗೊಂಡ ಮಾನವೀಯತೆಯ ಕೂಗಿಗೆ ನಾವು ಸೇರುತ್ತೇವೆ ಎಂದು ವ್ಯಕ್ತಪಡಿಸುತ್ತಾರೆ.
ಅಂತಿಮವಾಗಿ, ಅವರು, ಎಲ್ಲಾ ರೀತಿಯ ಯೆಹೂದ್ಯ ವಿರೋಧಿ, ಇಸ್ಲಾಮೋಫೋಬಿಯಾ ಮತ್ತು ಕ್ರಿಶ್ಚಿಯನ್ಫೋಬಿಯಾವನ್ನು ತಿರಸ್ಕರಿಸಲು ಕರೆ ನೀಡಿದರು. ಇಟಾಲಿಯದ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಧೈರ್ಯ ಮತ್ತು ಸ್ಪಷ್ಟತೆಯನ್ನು ತೋರಿಸಲು ಒತ್ತಾಯಿಸಿದರು. ಇದರಿಂದಾಗಿ ಅವರು ಶಾಂತಿಯ ಎಲ್ಲಾ ದಿಟ್ಟ ಮಾರ್ಗಗಳನ್ನು ಎದುರಿಸಲು ಮತ್ತು ಬೆಂಬಲಿಸಲು ಸೂಕ್ತವಾದ ಸ್ಥಳಗಳನ್ನು ತೆರೆಯಬಹುದು ಎಂದು ಭರವಸೆ ನೀಡಿದರು.