ಕೊರಿಯದ ಧರ್ಮಸಭೆಯ ರಕ್ತಸಾಕ್ಷಿಗಳ ಪವಿತ್ರೀಕರಣದ 100ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ
ವ್ಯಾಟಿಕನ್ ಸುದ್ದಿ
ಜುಲೈ 5, ಶನಿವಾರ, ದಕ್ಷಿಣ ಕೊರಿಯಾದ ಸಿಯೋಲ್‌ನವ ಮಹಾಧರ್ಮಕ್ಷೇತ್ರದಲ್ಲಿ, ಗಿಹೇ (1839) ಮತ್ತು ಬಿಯೊಂಗ್-ಒ (1846) ಕಿರುಕುಳಗಳ 79 ಕೊರಿಯದ ರಕ್ತಸಾಕ್ಷಿಗಳನ್ನು ಪವಿತ್ರೀಕರಿಸಿದ 100ನೇ ವಾರ್ಷಿಕೋತ್ಸವವನ್ನು ದಿವ್ಯಬಲಿಪೂಜೆಯ ಆಚರಣೆಯೊಂದಿಗೆ ಆಚರಿಸಿತು, ಅವರ ರಕ್ತಸಾಕ್ಷಿಗಳ ಕುರಿತು ಹೊಸ ವರದಿ ಮತ್ತು ವಿಶೇಷ ಪ್ರದರ್ಶನವನ್ನು ಬಿಡುಗಡೆ ಮಾಡಲಾಯಿತು ಎಂದು ಮಹಾಧರ್ಮಕ್ಷೇತ್ರದ ಜಾಲತಾಣದ ಪತ್ರಿಕಾ ಪ್ರಕಟಣೆಯು ಹೇಳುತ್ತದೆ.
ಕಿರುಕುಳದ ಸಂದರ್ಭದಲ್ಲಿಯೂ ಸಹ, ಈ ರಕ್ತಸಾಕ್ಷಿಗಳು ದೇವರಲ್ಲಿ ತಮ್ಮ ವಿಶ್ವಾಸವನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ಅವರ ಸಹಿಷ್ಣುತೆಯು ಅವರ ವಿಶ್ವಾಸವನ್ನು ಇನ್ನಷ್ಟೂ ಗಾಢಗೊಳಿಸಿತು, ಅದು ಅಂತಿಮವಾಗಿ ಸಾವನ್ನು ಸಹ ಜಯಿಸಿದ ನೈಜ ಭರವಸೆಯಾಗಿ ಫಲ ನೀಡಿತು" ಎಂದು ಸಿಯೋಲ್‌ನ ಮಹಾಧರ್ಮಕ್ಷೇತ್ರದ ಪೀಟರ್ ಸೂನ್-ಟೈಕ್ ಚುಂಗ್ ರವರು ತಮ್ಮ ಪ್ರಬೋಧನೆಯ ಸಮಯದಲ್ಲಿ ಹೇಳಿದರು.
ಗಿಹೇ ಮತ್ತು ಬಿಯೊಂಗ್-ಒ ಕಿರುಕುಳದ 79 ಕೊರಿಯದ ರಕ್ತಸಾಕ್ಷಿಗಳನ್ನು ಜುಲೈ 5, 1925ರಂದು ಸಂತ ಪೇತ್ರರ ಮಹಾದೇವಾಲಯದಲ್ಲಿ ವಿಶ್ವಗುರು ಹನ್ನೊಂದನೆ ಪಯಸ್ ರವರು ಪುನೀತರ ಪದವಿಗೆ ಸೇರಿಸಿದರು. ನಂತರ 1968ರಲ್ಲಿ ವಿಶ್ವಗುರು ಆರನೇ ಪಾಲ್ ರವರು 24 ರಕ್ತಸಾಕ್ಷಿಗಳ ಎರಡನೇ ಪುನೀತರ ಗುಂಪನ್ನು ಸಂತರ ಪದವಿಗೆ ಸೇರಿಸಿದರು ಮತ್ತು ಒಟ್ಟು 103 ಜನರನ್ನು ಒಳಗೊಂಡ ಎರಡೂ ಗುಂಪುಗಳನ್ನು 1984ರಲ್ಲಿ ವಿಶ್ವಗುರು ದ್ವಿತೀಯ ಜಾನ್ ಪಾಲ್ ರವರು ಒಟ್ಟಾಗಿ ಸಂತರ ಪದವಿಗೆ ಸೇರಿಸಿದರು.
ಸಿಯೋಲ್‌ನ ಸಿಯೋಸೊಮುನ್ ದೇಗುಲ ಇತಿಹಾಸ ವಸ್ತು ಸಂಗ್ರಹಾಲಯದಲ್ಲಿ ಶನಿವಾರ ನಡೆದ ಪ್ರಾರ್ಥನೆಯಲ್ಲಿ 1000ಕ್ಕೂ ಹೆಚ್ಚು ಭಕ್ತವಿಶ್ವಾಸಿಗಳು ಒಟ್ಟುಗೂಡಿದರು, ಅಲ್ಲಿ 79 ರಕ್ತಸಾಕ್ಷಿಗಳಲ್ಲಿ 41 ಜನರು ಪ್ರಾಣ ಕಳೆದುಕೊಂಡರು. ಫೈಡ್ಸ್ ಸುದ್ದಿ ಸಂಸ್ಥೆಯ ಪ್ರಕಾರ, 19 ನೇ ಶತಮಾನದಲ್ಲಿ ಸುಮಾರು 16,000 ಕಥೋಲಿಕರು ಕೊಲ್ಲಲ್ಪಟ್ಟರು ಎಂದು ಕೊರಿಯದ ಧರ್ಮಸಭೆಯು ಅಂದಾಜಿಸಿದೆ. 1895 ರವರೆಗೆ ಕೊರಿಯಾದಲ್ಲಿ ಕಥೋಲಿಕರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಲಾಗಿಲ್ಲ ಎಂದು ತಿಳಿದುಬಂದಿದೆ.