ವಿಯೆಟ್ನಾಂ- ಕಥೊಲಿಕ ಧರ್ಮದ ತೊಟ್ಟಿಲು
ಕೀಲ್ಸ್ ಗುಸ್ಸಿ
ಮೇ ತಿಂಗಳು ಮಾತೆ ಮರಿಯಮ್ಮನವರ ತಿಂಗಳ ಅಂತ್ಯವನ್ನು ಆಚರಿಸಲು, 10,000 ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ವಿಸ್ತಾರವಾದ ಡಾ ನಾಂಗ್ ಧರ್ಮಕ್ಷೇತ್ರದಲ್ಲಿರುವ ವಿವಿಧ ಧರ್ಮಕೇಂದ್ರಗಳು ಮತ್ತು ಸಮುದಾಯಗಳಿಂದ 10,000ಕ್ಕೂ ಹೆಚ್ಚು ಜನರು ಟ್ರಾ ಕಿಯುನ ಮಾತೆ ಮರಿಯಮ್ಮನವರ ದೇವಾಲಯಕ್ಕೆ ತೀರ್ಥಯಾತ್ರೆ ಮಾಡಿದರು.
ವಿಶ್ವಾಸದ ಘಟನೆ
ವ್ಯಾಟಿಕನ್‌ನ ಫೈಡ್ಸ್ ಸುದ್ದಿ ಸಂಸ್ಥೆಯ ಪ್ರಕಾರ, ಮಾತೆ ಮರಿಯಮ್ಮನವರ ಪುಣ್ಯಕ್ಷೇತ್ರವು 140 ವರ್ಷಗಳ ಹಿಂದೆ ಪೂಜ್ಯ ಕನ್ಯಾ ಮಾತೆ-ಮರಿಯಮ್ಮನವರ ದರ್ಶನವನ್ನು ಸ್ಮರಿಸುತ್ತದೆ. ಸ್ಥಳೀಯ ಸಂಪ್ರದಾಯದ ಪ್ರಕಾರ, ಪೂಜ್ಯ ಕನ್ಯಾ ಮಾತೆ-ಮರಿಯಮ್ಮನವರು ತನ್ನ ಮಕ್ಕಳಿಗೆ ಕಷ್ಟದ ಸಮಯದಲ್ಲಿ ಸಾಂತ್ವನ, ಪ್ರೋತ್ಸಾಹ ಮತ್ತು ಸಹಾಯ ಮಾಡಲು ಕಾಣಿಸಿಕೊಂಡರು ಎಂದು ಹೇಳುತ್ತದೆ.
ಹ್ಯೂ ಮಹಾಧರ್ಮಕ್ಷೇತ್ರದ ಸಹಾಯಕ (ಕೋಡ್ಜೂಟರ್) ಮಹಾಧರ್ಮಾಧ್ಯಕ್ಷಕರಾದ ಜೋಸೆಫ್ ಡ್ಯಾಂಗ್ ಡಕ್ ರವರು "ಪ್ರೀತಿ, ನಂಬಿಕೆ, ಬದ್ಧತೆ ಮತ್ತು ಸೇವೆಯ ಘಟನೆ, ಪ್ರಸ್ತುತ ಕಾಲದ ಸವಾಲುಗಳನ್ನು ಎದುರಿಸುವಾಗ ಒಬ್ಬರ ವಿಶ್ವಾಸವನ್ನು ವ್ಯಕ್ತಪಡಿಸುವ ಅವಕಾಶವಿದು" ಎಂದು ಬಣ್ಣಿಸಿದ ಪೂಜ್ಯ ಕನ್ಯಾ ಮಾತೆ-ಮರಿಯಮ್ಮನವರ ಭೇಟಿಯ ಪವಿತ್ರ ದಿನದಂದು ಯಾತ್ರಿಕರು ಈ ಪ್ರಯಾಣದಲ್ಲಿ ಭಾಗವಹಿಸಿದರು.
ದ್ವಿದಳ-ಅರ್ಥ
ಮೇ ತಿಂಗಳ ಅಂತ್ಯವನ್ನು ಗುರುತಿಸುವುದರ ಜೊತೆಗೆ, ತೀರ್ಥಯಾತ್ರೆಯು ಜೂನ್ 8 ರಂದು ನಡೆಯುವ ಪಂಚಾಶತಮ ದಿನದ ಹಬ್ಬದ ಆಚರಣೆಯ ಸಿದ್ಧತೆಗಾಗಿ, ಈ ಪವಿತ್ರ ಯಾತ್ರೆಯನ್ನು ಒಂದು ಸಾಧನವಾಗಿಯೂ ಕಾರ್ಯನಿರ್ವಹಿಸಿತು ಮತ್ತು ಇದು ಪೂಜ್ಯ ಕನ್ಯಾ ಮಾತೆ-ಮರಿಯಮ್ಮನವರನ್ನು "ಪಂಚಾಶತಮದ ಮಹಿಳೆ" ಎಂದು ಸ್ಮರಿಸುತ್ತದೆ.
ವಿಯೆಟ್ನಾಂನಲ್ಲಿ, ಕಥೊಲಿಕರು ಜನಸಂಖ್ಯೆಯ ಸುಮಾರು 7% ರಷ್ಟಿದ್ದಾರೆ (ಸುಮಾರು 7 ಮಿಲಿಯನ್ ಜನರು) ಮತ್ತು ಪೂಜ್ಯ ಕನ್ಯಾ ಮಾತೆ-ಮರಿಯಮ್ಮನವರ ಮೇಲೆ ದೃಢವಾದ ಭಕ್ತಿಯನ್ನು ಹೊಂದಿದ್ದಾರೆ. ಮೇ ತಿಂಗಳಾದ್ಯಂತ, ವಿವಿಧ ಸ್ಥಳಗಳ ಮಾತೆ ಮರಿಯಮ್ಮನವರ ದೇವಾಲಯಗಳಲ್ಲಿ ಆಚರಣೆಗಳು, ಪ್ರಾರ್ಥನಾ ಜಾಗರಣೆಗಳು, ತೆರೆದ ಸಭಾಂಗಣದಲ್ಲಿ ದಿವ್ಯಬಲಿಪೂಜೆಗಳು ಮತ್ತು ಸಮುದಾಯ ಜಪಮಾಲೆಗಳ ಪ್ರಾರ್ಥನೆಗಳು ನಡೆದವು.
ಮಾತೆ ಮರಿಯಳ ತಿಂಗಳ ಗೌರವಾರ್ಥವಾಗಿ, ಯಾತ್ರಿಕರು ದೇಶದ ಇತಿಹಾಸದುದ್ದಕ್ಕೂ ಕ್ರೂರ ಹಿಂಸಾಚಾರದ ಸಮಯದಲ್ಲಿ ಕಥೊಲಿಕರನ್ನು ರಕ್ಷಿಸಲು ಪೂಜ್ಯ ಕನ್ಯಾ ಮಾತೆ-ಮರಿಯಮ್ಮನವರು ಕಾಣಿಸಿಕೊಂಡ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಉದಾಹರಣೆಗೆ, ಜನರು ಹ್ಯೂ ಧರ್ಮಕ್ಷೇತ್ರದಲ್ಲಿರುವ ಲಾ ವಾಂಗ್‌ನ ಮಾತೆ ಮರಿಯಮ್ಮನವರ, ಕ್ಸುವಾನ್ ಲಾಕ್ ಧರ್ಮಕ್ಷೇತ್ರದಲ್ಲಿರುವ, ನುಯಿ ಕುಯಿ ಮಾತೆ ಮರಿಯಮ್ಮನವರ ಅಥವಾ ಡಾ ನಾಂಗ್ ಧರ್ಮಕ್ಷೇತ್ರದಲ್ಲಿರುವ, ಟ್ರಾ ಕಿಯು ಮಾತೆ ಮರಿಯಮ್ಮನವರ ಮಧ್ಯಸ್ಥಿಕೆ ಮತ್ತು ರಕ್ಷಣೆಯನ್ನು ಕೇಳಿಕೊಂಡು ಪ್ರಯಾಣಿಸುತ್ತಾರೆ.
ಕಥೊಲಿಕ ಧರ್ಮದ ತೊಟ್ಟಿಲು
ಮಹಾಧರ್ಮಾಧ್ಯಕ್ಷರಾದ ಡ್ಯಾಂಗ್ ಡಕ್ ರವರು ಟ್ರಾ ಕಿಯುವಿನಲ್ಲಿನ ಮಾತೆ ಮರಿಯಮ್ಮನವರ ದೇವಾಲಯಕ್ಕೆ ತೀರ್ಥಯಾತ್ರೆಯನ್ನು "ವೈಯಕ್ತಿಕ ಕ್ರಿಯೆ ಮಾತ್ರವಲ್ಲ,ದೇವರು ನಮಗೆ ನೀಡಿರುವ ದೈವಕರೆ ಮತ್ತು ಧ್ಯೇಯವನ್ನು ನವೀಕರಿಸುವ ಸಾಮುದಾಯಿಕ ಕ್ರಿಯೆಯಾಗಿದೆ, ಏಕೆಂದರೆ ನಾವೆಲ್ಲರೂ ದೇವರ ಜನರು ಮತ್ತು ನಾವೆಲ್ಲರೂ ನಂಬಿಕೆ, ಪ್ರೀತಿ, ಸುವಾರ್ತಾಬೋಧನೆಯ ಕಡೆಗೆ ಒಟ್ಟಿಗೆ ನಡೆಯುತ್ತಿದ್ದೇವೆ" ಎಂದು ಬಣ್ಣಿಸಿದರು.
1615ರಲ್ಲಿ ಹೋಯಿ ಆನ್‌ಗೆ ಸುವಾರ್ತಾಬೋಧನೆಗಾಗಿ ಆಗಮಿಸಿದ ಮೂವರು ಜೆಸ್ವಿಟ್ ಧರ್ಮಪ್ರಚಾರಕರಿಂದ ಡಾ ನಾಂಗ್ ನ ಮಹಾಧರ್ಮಕ್ಷೇತ್ರದಲ್ಲಿ ಹುಟ್ಟಿಕೊಂಡಿರುವುದರಿಂದ, ಇದನ್ನು ದಕ್ಷಿಣ ವಿಯೆಟ್ನಾಂನಲ್ಲಿ ಕಥೊಲಿಕ ಧರ್ಮದ ತೊಟ್ಟಿಲು ಎಂದು ಬಹಳ ಹಿಂದಿನಿಂದಲೂ ಪರಿಗಣಿಸಲಾಗಿದೆ.
17 ನೇ ಮತ್ತು 18 ನೇ ಶತಮಾನಗಳಲ್ಲಿ, ಡಾ ನಾಂಗ್ ಮಹಾಧರ್ಮಕ್ಷೇತ್ರದಲ್ಲಿ ದಕ್ಷಿಣ ವಿಯೆಟ್ನಾಂನ ಕೊಚ್ಚಿಂಚಿನಾ ಧರ್ಮಕ್ಷೇತ್ರದಲ್ಲಿನ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದ್ದು, ಅಲ್ಲಿಂದ ಧರ್ಮಪ್ರಚಾರಕರು ನಿರ್ಗಮಿಸಿದರು. ವಿಯೆಟ್ನಾಂ ಈಗ ತಮ್ಮ ಮೊದಲ ರಕ್ತಸಾಕ್ಷಿಗಳಾದ ಪೂ ಯೆನ್‌ನ ಪೂಜ್ಯ ಆಂಡ್ರ್ಯೂರವರನ್ನು ಹೊಂದಿದ್ದಾರೆ, ಅವರು ವಿಶ್ವಗುರು ದ್ವಿತೀಯ ಸಂತ ಜಾನ್ ಪಾಲ್ ರವರಿಂದ ಸಂತರ ಪುನೀತ ಪದವಿಯ ಪದೋನ್ನತಿ ಪಡೆದ ಧರ್ಮೋಪದೇಶಕರಾಗಿದ್ದಾರೆ.